ಜಿಪಂ ಮಾಜಿ ಸದಸ್ಯನ ವಿರುದ್ಧ ಕೇಸ್

Published on

ಸಿದ್ದಾಪುರ : ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಕಾರ್ಮಿಕರನ್ನು ಜೀತದಾಳನ್ನಾಗಿ ಇರಿಸಿದ ಆರೋಪದ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಮೇಕೂರು ಹೊಕ್ಕೇರಿ ಗ್ರಾಮದ ನಿವಾಸಿ ಹಾಗೂ ಜಿ.ಪಂ. ಮಾಜಿ ಸದಸ್ಯ ವಿಜು ಸುಬ್ರಹ್ಮಣಿ ಅವರ ತೋಟದ ಲೈನ್‌ಮನೆಯಲ್ಲಿ ಪಣಿಯರ ಕೃಂದ (55) ಹಾಗೂ ಮುತ್ತಿ (50) ಎಂಬುವರನ್ನು ಕೆಲಸಕ್ಕೆ ಇರಿಸಿಕೊಂಡಿದ್ದರು. ಕುಟ್ಟ ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ತೆರಳಿ ಉಪವಿಭಾಗಾಧಿಕಾರಿಯನ್ನು ಭೇಟಿಯಾಗಿ ತಮ್ಮನ್ನು ಜೀತದಾಳುಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮೌಖಿಕವಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಉಪ ವಿಭಾಗಾಧಿಕಾರಿ ಆದೇಶದಂತೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಜಿಪಂ ಸದಸ್ಯ ಹಾಗೂ ಕಾರ್ಮಿಕರನ್ನು ಕರೆಯಿಸಿ ವಿಚಾರಣೆ ನಡೆಸಿದ ಸಂದರ್ಭ ಪರಿಶಿಷ್ಟ ಪಂಗಡದ ಕಾರ್ಮಿಕರನ್ನು ಜೀತದಾಳುಗಳಾಗಿ ಇರಿಸಿಕೊಂಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಪದ್ಧ್ದತಿ ವಿಮುಕ್ತಿ ಕಾಯ್ದೆ ಹಾಗೂ ಇನ್ನಿತರ ಕಾಯ್ದೆಯ ಅಡಿಯಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net