

ಹಳಿಯಾಳ: ಸ್ವತ್ತಿನ ಅಪರಾಧ ಪ್ರಕರಣಗಳು, ಅಕ್ರಮ ಮೀಟರ್ ಬಡ್ಡಿ ವ್ಯವಹಾರ, ಗ್ಯಾಂಬ್ಲಿಂಗ್ ಇತ್ಯಾದಿ ಅಕ್ರಮ ಚಟುವಟಿಕೆ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಮೀಟರ್ ಬಡ್ಡಿ ಲೇವಾದೇವಿ ಮಾಡುವವರ ಮೇಲೆ ಹಳಿಯಾಳ ಪೊಲೀಸರು ಕಾರ್ಯಾಚರಣೆ ನಡೆಸಿ 7 ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಗುರುವಾರ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಫೆ. 5ರಂದು ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ರಚನೆ ಮಾಡಿ, ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಕಡೆ ಕಾರ್ಯಾಚರಣೆ ಮಾಡುವ ಮೂಲಕ ಬಡ್ಡಿ ವ್ಯವಹಾರ ಮಾಡುವವರಿಗೆ ಬಿಸಿ ಮುಟ್ಟಿಸಲಾಗಿದೆ.
ಬಡ್ಡಿ ವ್ಯವಹಾರದ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಸರ್ಚ್ ವಾರೆಂಟ್ ಆದೇಶ ಪಡೆದು, ಪಟ್ಟಣದ ಚವ್ಹಾಣ ಪ್ಲಾಟ್ ನಿವಾಸಿ ರಾಕೇಶ ದಿನಕರ ವಾಲೇಕರ, ಚರ್ಚ್ ಪಕ್ಕದ ನಿವಾಸಿ ಪಿ. ಜೀವನ ಹಳ್ಳೂರ, ಪಟ್ಟಣದ ವಿವಿಧ ಭಾಗದ ಚಂದ್ರಕಾಂತ ನಾರಾಯಣ ಗೋಂಧಳಿ, ಪ್ರಕಾಶ ಶಿವಾಜಿ ಗಾಂಜಾಳಿ, ವಿಜಯ ಬೊಬಾಟಿ, ಸಂತೋಷ ಸಿದ್ದಪ್ಪ ನಾಯ್ಕ, ಶುಭಂ ರಾಮನಾಥ ನಾಯ್ಕ ಅವರ ಮನೆ ಮೇಲೆ ದಾಳಿ ನಡೆಸಿ 7 ಜನರ ವಿರುದ್ಧ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.