

ತೀರ್ಥಹಳ್ಳಿ: ಮಂಡಗದ್ದೆಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಫೋರ್ಡ್ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮಂಡಗದ್ದೆ ಸಮೀಪದ 15ನೇ ಮೈಲಿಕಲ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 11.30ಕ್ಕೆ ಈ ಅವಘಡ ಸಂಭವಿಸಿದೆ.
ಕಾರು ಹೊತ್ತಿ ಉರಿಯುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಶಿವಮೊಗ್ಗ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. ಕಾರಿನಲ್ಲಿ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ಅನ್ವರ್ ಎಂಬುವರಿಗೆ ಸೇರಿದ ಈ ಕಾರು, ಶಿವಮೊಗ್ಗದಿಂದ ಮಂಡಗದ್ದೆಗೆ ಬಾಡಿಗೆಗೆ ಬಂದಿತ್ತು. ಪ್ರಯಾಣಿಕರನ್ನು ಮಂಡಗದ್ದೆಯಲ್ಲಿ ಇಳಿಸಿ ಶಿವಮೊಗ್ಗಕ್ಕೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ. ಕುತೂಹಲದ ಸಂಗತಿಯೆಂದರೆ ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಕಾರೊಂದು ಇದೇ ರೀತಿ ಬೆಂಕಿಗೆ ಆಹುತಿಯಾಗಿತ್ತು. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.