ಸಂಕಷ್ಟಕ್ಕೆ ಸಿಲುಕಿದ ಕ್ಯಾರೆಟ್ ಬೆಳೆಗಾರರು, ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆವಕ

04 Nandagudi 1 Carrot
Published on

ಎಂ.ರಾಮೇಗೌಡ ನಂದಗುಡಿ

ಕರೊನಾದಿಂದಾಗಿ ಮಾರುಕಟ್ಟೆ ಸಿಗದೆ ಕಂಗಾಲಾಗಿರುವ ನಂದಗುಡಿ ಹೋಬಳಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆ ಕಟಾವು ಮಾಡಲೂ ಆಗದೆ ಜಮೀನುಗಳಲ್ಲಿ ಕೊಳೆಯುತ್ತಿರುವ ಸ್ಥಿತಿಯನ್ನು ಕಣ್ಣೆದುರೇ ನೋಡುವಂತಾಗಿದೆ.

ಅಲ್ಪ ಸ್ವಲ್ಪ ನೀರಾವರಿ ಹೊಂದಿರುವ ರೈತರು ಕ್ಯಾರೆಟ್ ಬೆಳೆದು ಉತ್ತಮ ಫಸಲಿಗಾಗಿ ಎದುರು ನೋಡುತ್ತಿದ್ದರು. ಇನ್ನೇನು ಕೊಯ್ಲಿಗೆ ಸಿದ್ಧವಾಗಿರುವಾಗಲೇ ಹೊರ ರಾಜ್ಯಗಳಿಂದ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ರವಾನೆಯಾಗಿದೆ ಎನ್ನಲಾಗಿದ್ದು, ಸ್ಥಳೀಯ ಕ್ಯಾರೆಟ್ ಕೇಳುವವರಿಲ್ಲದಂತಾಗಿದೆ. ಇದರಿಂದ ಕೆಜಿಗೆ 40 ರೂಪಾಯಿ ಇದ್ದ ದರ ಏಕಾಏಕಿ ನಾಲ್ಕೈದು ರೂಪಾಯಿಗೆ ಕುಸಿದಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಸದಾಕಾಲ ನಷ್ಟ: ನಂದಗುಡಿ ಹೋಬಳಿಯ ನೆಲವಾಗಿಲು, ಬೈಲನರಸಾಪುರ, ಹೆತ್ತಕ್ಕಿ, ತಾವರೆಕೆರೆ, ಶಿವನಾಪುರ, ನಂದಗುಡಿ ಹಾಗೂ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಪ್ರಮುಖ ಬೆಳೆಯಾಗಿ ಕ್ಯಾರೆಟ್ ಬೆಳೆಯುತ್ತಾರೆ. ಕಳೆದ ವರ್ಷ ಜಡಿ ಮಳೆಗೆ ಕೊಯ್ಲಿಗೆ ಬಂದ ಫಸಲು ನೆಲದ ಪಾಲಾಗುವಂತಾಯಿತು. ನಂತರದ ಬೆಳೆ ಅಧಿಕ ತೇವಾಂಶಕ್ಕೆ ತುತ್ತಾಗಿ ರೋಗ ಬಾಧೆಗೆ ಒಳಗಾಗಿ ನಷ್ಟವುಂಟುಮಾಡಿತು ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

1 ಎಕರೆಯಲ್ಲಿ ಕ್ಯಾರೆಟ್ ಬೆಳೆಯಲು 60 ಸಾವಿರ ರೂ. ವೆಚ್ಚವಾಗುತ್ತದೆ. ಉತ್ತಮ ಬೆಳೆ ಬೆಳೆದು ಕೆಜಿಗೆ 40-50 ರೂ.ಗಳವರೆಗೆ ಮಾರಾಟವಾದರೆ ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ನಿರೀಕ್ಷಿಸಬಹುದು. ಫಸಲು ಕೀಳಿಸಿ ಮಾರುಕಟ್ಟೆಗೆ ಸಾಗಿಸಲು ವಾಹನ ವೆಚ್ಚವೇ ಹೆಚ್ಚಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ದರ ಕುಸಿದರೆ ರೈತನ ಬೆವರಿಗೆ ಬೆಲೆಯಿಲ್ಲದಂತಾಗುತ್ತದೆ ಎಂದು ಸ್ಥಳೀಯ ರೈತರು ಅಲವತ್ತುಗೊಂಡಿದ್ದಾರೆ.

2 ಎಕರೆಯಲ್ಲಿ ಕ್ಯಾರೆಟ್ ಬೆಳೆದಿದ್ದು, ಬೆಲೆ ಕುಸಿದಿರುವುದರಿಂದ ಸಲು ಕೀಳಲು ಕೂಲಿ ನೀಡಲೂ ಹಣವಿಲ್ಲದಂತಾಗಿದೆ. ಉತ್ತಮ ಸಲು ಜಮೀನಿನಲ್ಲೇ ಕೊಳೆಯುವ ಸ್ಥಿತಿ ನೋಡಬೇಕಾಗಿದೆ. ಅಂಬರೀಷ್, ಕ್ಯಾರೆಟ್ ಬೆಳೆಗಾರ ಬನಹಳ್ಳಿ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಬೆಂಬಲ ಬೆಲೆ ಘೋಷಿಸಬೇಕು. ಸರ್ಕಾರ ರೈತರಿಂದ ನೇರವಾಗಿ ಖರೀದಿಸಿ ದಲ್ಲಾಳಿಗಳ ಕಪಿ ಮುಷ್ಠಿಯಿಂದ ಕೃಷಿಕರನ್ನು ಪಾರು ಮಾಡಬೇಕು. ಹಕ್ಕಲೇಗೌಡ, ಪ್ರಧಾನ ಕಾರ್ಯಾದರ್ಶಿ, ರೈತ ಸಂಘ ಮತ್ತು ಹಸಿರು ಸೇನೆ, ತರಬಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net