ಕರೊನಾ ವಿರುದ್ಧ ಕಟ್ಟೆಚ್ಚರ ವಹಿಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ

DSC_0712
Published on

ತುಮಕೂರು : ಜಿಲ್ಲೆಯಲ್ಲಿ ಕರೊನಾ ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿಯೂ ಕರೊನಾ ಪ್ರಕರಣಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಕರೊನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಐಸೋಲೇಟ್ ಮಾಡಬೇಕು. ಅಲ್ಲದೆ, ಸೋಂಕು ದೃಢಪಟ್ಟವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು ಎಂದರು.

ತಾಲೂಕಿನಲ್ಲಿಯೂ ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು, ನಿರ್ಲಕ್ಷ್ಯದಿಂದ ಹೆಚ್ಚು ಪ್ರಕರಣಗಳು ಕಂಡು ಬಂದರೆ ಅಂತಹ ವ್ಯಾಪ್ತಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ವರಿಕೆ ನೀಡಿದರು.

ಜಿಲ್ಲೆಯಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ನೂರರಷ್ಟು ಲಸಿಕಾಕರಣ ಯಶಸ್ವಿಗೊಳಿಸಬೇಕು. ಶೇ.100 ಲಸಿಕಾಕರಣ ಮಾಡಲೇಬೇಕು, ಲಸಿಕೆಯಿಂದ ಯಾರೂ ಬಿಟ್ಟು ಹೋಗಬಾರದು. ಅರಿವು ಮೂಡಿಸುವ ಮೂಲಕ ಅರ್ಹರಿಗೆ ಲಸಿಕೆ ನೀಡಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್ ಚುನಾವಣಾ ಸಂಬಂಧ ಡಿ.7ರಂದು ಸಂಜೆ 4ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಬೇಕು. ಮತದಾನದ ದಿನದಂದು ಮತಗಟ್ಟೆಗಳಲ್ಲಿ ಬ್ಯಾಲೆಟ್ ಬಾಕ್ಸ್ ತೆರೆಯುವ ಮತ್ತು ಮತದಾನ ಮುಗಿದ ಮೇಲೆ ಬ್ಯಾಲೆಟ್ ಬಾಕ್ಸ್ ಸೀಲ್ ಮಾಡುವ ಹಾಗೂ ಮತದಾರರು ಬಂದು ಮತದಾನ ಮಾಡುವ ಕುರಿತು ವಿಡಿಯೋ ಮಾಡುವ ಬಗ್ಗೆ ಎಲ್ಲ ವೀಡಿಯೋಗ್ರಾಫರ್‌ಗಳಿಗೆ ಆಯಾ ತಹಸೀಲ್ದಾರ್‌ಗಳು ತರಬೇತಿ ನೀಡಬೇಕು ಎಂದರು.

ಮತದಾರರು ಮತದಾನ ಮಾಡುವುದನ್ನು ವಿಡಿಯೋ ಮಾಡುವಂತಿಲ್ಲ, ನಿಯಮ ಉಲ್ಲಂಘನೆಯಾಗದಂತೆ ಅಧಿಕಾರಿಗಳು ವಿಡಿಯೋ ಮಾಡಬೇಕು. ಅಂದರೆ, ಮತದಾರರು ಆಗಮಿಸುವ ವೇಳೆಯಷ್ಟೇ ವಿಡಿಯೋ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಅಜಯ್ ಮತ್ತಿತರರು ಇದದರು.

ಜಿಲ್ಲೆಯಲ್ಲಿ ಸೋಮವಾರ 8 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಗುಣಮುಖರಾದ 6 ಜನರು ಮನೆಗೆ ವಾಪಸಾದರು. ಪ್ರಸ್ತುತ ಜಿಲ್ಲೆಯಲ್ಲಿ 155 ಸಕ್ರಿಯ ಪ್ರಕರಣಗಳಿವೆ, ಈ ಪೈಕಿ ಹೊರರಾಜ್ಯದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ವೈರಸ್ ದೃಢವಾಗಿದ್ದು ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ತಾಲೂಕಿನಲ್ಲಿ 73, ಕುಣಿಗಲ್ 10, ಗುಬ್ಬಿ 17, ತುರುವೇಕೆರೆ 9, ಮಧುಗಿರಿ 8, ಚಿಕ್ಕನಾಯಕನಹಳ್ಳಿ 7, ಶಿರಾ 6, ತಿಪಟೂರು 4, ಕೊರಟಗೆರೆ, ಪಾವಗಡ ತಲಾ 3, ಹಾಗೂ ಹೊರಜಿಲ್ಲೆಯ 15 ಜನರಿಗೆ ಸೋಂಕು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net