ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಒಂದು ಲಕ್ಷ ರೂ. ನಿವೃತ್ತಿ ಪರಿಹಾರ ನೀಡಿ

CARRIER LABOURS
ಕುಕನೂರು ಪಟ್ಟಣದ ಎಪಿಎಂಸಿ ಕಾರ್ಯಾಲಯದಲ್ಲಿ ಹಮಾಲಿ ಕಾರ್ಮಿಕರು ಎಪಿಎಂಸಿ ನಿರ್ದೇಶಕ ಗಂಗಾಧರಸ್ವಾಮಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಹಿರೇಮಠ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಪ್ರಮುಖರಾದ ಚಂದ್ರಪ್ಪ ಆರ್‌ಬೆರಳ್ಳಿನ್, ಬಸಪ್ಪ ಅಣ್ಣಿಗೇರಿ ಇದ್ದರು.
Published on

ಕುಕನೂರು: ಹಮಾಲರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಮಾಲಿ ಕಾರ್ಮಿಕರು ಪಟ್ಟಣದ ಎಪಿಎಂಸಿ ನಿರ್ದೇಶಕ ಗಂಗಾಧರಸ್ವಾಮಿಗೆ ಮನವಿ ಸಲ್ಲಿಸಿದರು.

ಕಾಯಕ ನಿಧಿ ಯೋಜನೆಯಡಿ ಎಪಿಎಂಸಿ ಹಮಾಲಿ ಕಾರ್ಮಿಕರು 60 ವರ್ಷದ ನಂತರ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ 1 ಲಕ್ಷ ರೂ. ನಿವೃತ್ತಿ ಪರಿಹಾರ ನೀಡಬೇಕು. ಎಲ್‌ಐಸಿಯ ಗ್ರೂಪ್ ವಿಮಾ ಯೋಜನೆ ಬಹಳಷ್ಟು ಅನುಕೂಲವಾಗಿದೆ. ಆದರೆ, ಈ ವಿಮಾ ಯೋಜನೆ ನವೀಕರಿಸುವಾಗ ಇಲಾಖೆಯಿಂದ ಹಣ ಸಂದಾಯವಾದ ದಿನದಿಂದ 45 ದಿನಗಳವರೆಗಿನ ಅವಧಿಯಲ್ಲಿ ಮರಣ ಸಂಭವಿಸಿದರೆ ಅವರಿಗೆ ಮರಣ ಪರಿಹಾರ ಸಿಗುವುದಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.

ಕುಕನೂರು ಎಪಿಎಂಸಿಯಲ್ಲಿ ಬಾಕಿ ಇರುವ ಮರಣ ಪರಿಹಾರಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಮಾಲಿ ಕಾರ್ಮಿಕರಿಗೆ ವಿಶ್ರಾಂತಿಗಾಗಿ ಶ್ರಮಿಕ ಭವನದ ನಿರ್ಮಿಸಬೇಕು. ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಉಚಿತವಾಗಿ ಎಲ್ಲ ಹಮಾಲಿ ಕಾರ್ಮಿಕರಿಗೆ ಜಾರಿ ಮಾಡಬೇಕು. ಹಮಾಲಿ ಕಾರ್ಮಿಕರಿಗೆ ಮನೆಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಗಂಗಾಧರಸ್ವಾಮಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು. ಕೂಡಲೇ ಶ್ರಮಿಕ ಭವನಕ್ಕೆ ನಿವೇಶವನ್ನು ನೀಡಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು.

ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಹಿರೇಮಠ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಪ್ರಮುಖರಾದ ಚಂದ್ರಪ್ಪ ಆರ್‌ಬೆರಳ್ಳಿನ್, ಬಸಪ್ಪ ಅಣ್ಣಿಗೇರಿ, ಗಾಳೇಪ್ಪ, ದೇವಪ್ಪ ಭಂಡಾರಿ, ವಿರೂಪಾಕ್ಷಪ್ಪ ಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net