

ರಾಮನಗರ: ಹಸಿರು ವಲಯದಲ್ಲಿ ಇದ್ದು ಬೀಗುತ್ತಿದ್ದ ರಾಮನಗರ ಜಿಲ್ಲೆಯಲ್ಲಿ ಇದೀಗ ಕರೊನಾ ಸಾವಿನ ಹಂತದವರೆಗೂ ವ್ಯಾಪಿಸಿದ್ದು, ಸೋಮವಾರ ಮೊದಲಿ ಬಲಿ ಪಡೆದುಕೊಂಡಿದೆ.
ಎದೆ ನೋವು ಎಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ವ್ಯಕ್ತಿ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದು, ಈತನಿಗೆ ಕೋವಿಡ್ ಸೋಂಕು ಇರುವುದು ಧೃಡಪಟ್ಟಿದೆ. ಇದರೊಂದಿಗೆ ಕರೊನಾ ಮರಣ ಮೃದಂಗ ಬಾರಿಸಲು ಆರಂಭಿಸಿದೆ. ಇದಲ್ಲದೆ ರಾಮನಗರದಲ್ಲಿ ಮತ್ತೆರಡು ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 23ಕ್ಕೇ ಏರಿದೆ.
ರಾಮನಗರ ತಾಲೂಕಿನ ಬಿಡದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ 45 ವರ್ಷದ ವ್ಯಕ್ತಿ ಸೋಮವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದಾನೆೆೆ. ನಂತರ ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯಲ್ಲಿ ಕರೊನಾ ಸೋಂಕಿರುವುದು ಧೃಡಪಟ್ಟಿದೆ. ಹೀಗಾಗಿ ಈತನ ಟ್ರಾವೆಲ್ ಹಿಸ್ಟರಿ ಹುಡುಕುವುದೇ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಎದೆನೋವಿನಿಂದ ಭಾನುವಾರವೇ ಈತ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ. ಹೀಗಾಗಿ, ಅಂಗಡಿಯಲ್ಲಿ ತರಕಾರಿ ಖರೀದಿಸಿದವರೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ. ಈತ ಮೃತಪಟ್ಟ ಬಳಿಕ ಪರೀಕ್ಷೆ ನಡೆಸಿ, ವರದಿ ಬರುವವರೆಗೂ, ಈತನಿಗೆ ಕರೊನಾ ಇದೆ ಎಂಬುದೇ ತಿಳಿದಿರಲಿಲ್ಲ ಎನ್ನುವುದೇ ವಿರ್ಪಯಾಸ.
ತಾಯಿ-ಮಗನಿಗೆ ಸೋಂಕು: ಜಿಲ್ಲೆಯಲ್ಲಿ ಭಾನುವಾರ ಕೂಡ ಮತ್ತೆರಡು ಹೊಸ ಪ್ರಕರಣ ಪತ್ತೆಯಾಗಿದೆ.
ರಾಮನಗರದ ಟಿಪ್ಪುನಗರ ತಾಯಿ ಹಾಗೂ ಮಗನಿಗೆ ಕರೊನಾ ಸೋಂಕು ತಗುಲಿದೆ. 28 ವರ್ಷದ ಮಗ ಹಾಗೂ 48 ವರ್ಷದ ತಾಯಿ ಸೋಂಕಿತರಾಗಿದ್ದು, ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಅಲ್ಲಿಂದಲೇ ಈತನಿಗೆ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರಿಗೂ ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 28 ವರ್ಷದ ಯುವಕನಲ್ಲಿ ಕಳೆದ 4 ದಿನಗಳ ಹಿಂದೆಯೇ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ 4 ದಿನದ ಹಿಂದೆಯೇ ತಾಯಿ ಹಾಗು ಮಗನನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಹೀಗಾಗಿ ಇಬ್ಬರೂ ಸದ್ಯ ಆರೋಗ್ಯವಾಗಿದ್ದಾರೆ.
ಮಾಗಡಿಯ ಯುವಕನಿಗೆ ಕರೊನಾ: ಮಾಗಡಿ ನಿವಾಸಿ 34 ವರ್ಷದ ಯುವಕನೊಬ್ಬನಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಈತ ಮೂರು ದಿನದ ಹಿಂದೆ ತುಮಕೂರು ನಗರದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದ. ಸೋಮವಾರದ ವರದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಾಗಡಿಯ ಗಾಡಿವೆಂಕಟಪ್ಪ ರಸ್ತೆ ನಿವಾಸಿಯಾಗಿದ್ದ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಹೀಗಾಗಿ ಮಾಗಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಸೋಂಕಿತರ ಅಂಕಿ-ಅಂಶ: ಜಿಲ್ಲೆಯಲ್ಲಿ 23ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ. ರಾಮನಗರ 9, ಚನ್ನಪಟ್ಟಣ 9, ಮಾಗಡಿ 3, ಕನಕಪುರದಲ್ಲಿ 1, ಹಾಗೂ ಬಿಡದಿಯಲ್ಲಿ ಒಂದು ಸೋಂಕು ಪತ್ತೆಯಾಗಿದೆ. ಓರ್ವ ಮೃತ ಪಟ್ಟಿದ್ದಾನೆ. ಒಂದು ಪ್ರಕರಣ ಗುಣಮುಖವಾಗಿದೆ.