ಬೈಂದೂರಿನಲ್ಲಿ ಕರೊನಾ ಸೋಂಕು ವದಂತಿ

carona logo
Published on

ಕುಂದಾಪುರ: ಹೊರ ರಾಜ್ಯದಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಕರೊನಾ ಸೋಂಕಿದೆ ಎಂಬ ಸುದ್ದಿ ಬೈಂದೂರಲ್ಲಿ ಶನಿವಾರ ಆತಂಕ ಹುಟ್ಟುಹಾಕಿದ್ದು, ಶಂಕಿತ ವ್ಯಕ್ತಿಯನ್ನು ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಿ, ಜತೆಯಲ್ಲಿ ಬಂದ ಪ್ರಯಾಣಿಕರನ್ನು ಬಿಸಿಎಂ ಹಾಸ್ಟಲ್‌ನಲ್ಲಿ ಹಾಗೂ ಕುಟುಂಬಿಕರನ್ನು ಹೋಮ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಬೆಳಗಾವಿ ಜಿಲ್ಲೆಯಿಂದ ಬೈಂದೂರಿಗೆ ಶನಿವಾರ ರಾತ್ರಿ ಬಂದ ವ್ಯಕ್ತಿ ಕಳವಾಡಿ ಮೂಲಕ ಮನೆ ಸೇರಿದ್ದರು. ಈತ ಬೆಳಗಾವಿಯಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದ್ದರು. ಮೊಬೈಲ್‌ನಲ್ಲಿ ಅಳವಡಿಸಿರುವ ಆರೋಗ್ಯ ಸೇತು ಆ್ಯಪ್‌ನಲ್ಲಿ ಕರೊನಾ ಪಾಸಿಟಿವ್ ತೋರಿಸಿದೆ ಎಂದು ಬೈಂದೂರು ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಪರೀಕ್ಷೆಗೆ ಬಂದಿದ್ದರು. ಈ ವ್ಯಕ್ತಿಗೆ ಕರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ಕೆಲವು ಕಾಲ ಬೈಂದೂರು ಜನರಲ್ಲಿ ಆತಂಕ ಹುಟ್ಟುಹಾಕಿತ್ತು. ಆಸ್ಪತ್ರೆಗೆ ಬಂದ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ವರದಿ ನಿರೀಕ್ಷಿಸಲಾಗಿದೆ. ವ್ಯಕ್ತಿಗೆ ಬೆಳವಾಗಿಯಲ್ಲಿ ವರದಿ ನೆಗೆಟಿವ್ ಬಂದಿತ್ತು. ಆದರೂ ಅನುಮಾನಕ್ಕೆ ಆಸ್ಪದ ನೀಡದೆ, ವ್ಯಕ್ತಿಯ ಕರೊನಾ ಪರೀಕ್ಷೆಗೆ ಒಳಪಡಿಸಿದ್ದು, ಕುಂದಾಪುರ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡಿಗೆ ಸೇರಿಸಲಾಗಿದೆ ಎಂಬ ಮಾಹಿತಿಯ್ನನು ವೈದ್ಯರು ನೀಡಿದ್ದಾರೆ.

ಪ್ರಯಾಣಕ್ಕೆ ಅನುಮತಿ ಲಭಿಸಿದ್ದೇ ಅಚ್ಚರಿ!: ಬೆಳಗಾವಿಯಿಂದ ಎರಡು ಟಿಟಿ ವಾಹನದಲ್ಲಿ 13 ಜನ ಬೈಂದೂರು ಹಾಗೂ ವಿವಿಧ ಕಡೆಯವರು ಪ್ರಯಾಣಿಸಿದ್ದು, ಅವರ ಆರೋಗ್ಯ ಇಲಾಖೆ ಟ್ರೇಸ್ ಮಾಡಿ ಎಲ್ಲರನ್ನೂ ಹಾಸ್ಟೆಲ್‌ನಲ್ಲಿ ಇರಿಸಿದ್ದು, ಕುಟುಂಬಿಕರ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇದರೊಟ್ಟಿಗೆ ಕರೊನಾ ಪರೀಕ್ಷೆಗೆ ಒಳಗಾದ ವ್ಯಕ್ತಿ ಕ್ವಾರಂಟೈನ್‌ನಲ್ಲಿ ಇರಬೇಕಿದ್ದು, ಅವರಿಗೆ ಪ್ರಯಾಣಕ್ಕೆ ಹೇಗೆ ಅನುಮತಿ ಸಿಕ್ಕಿತು, ಬೆಳಗಾವಿಯಂದ ಚೆಕ್‌ಪೋಸ್ಟ್‌ನಲ್ಲಿ ಹೇಗೆ ಒಳಗೆ ಬಂದರು ಎನ್ನುವುದೇ ಅಚ್ಚರಿ. ಶಂಕಿತ ವ್ಯಕ್ತಿ ಖಾನಾಪುರದಿಂದ ಹೊರಟಿದ್ದು, ಧಾರವಾಡ ಗಡಿ ಬಳಿ ವಾಹನದಿಂದ ಇಳಿದಿದ್ದರು. ಶಿರೂರು ಬಳಿ ಮತ್ತೊಮ್ಮೆ ವಾಹನದಿಂದ ಇಳಿದಿದ್ದಾರೆ. ಈ ವ್ಯಕ್ತಿ ಆಸ್ಪತ್ರೆಗೆ ಬರುವಾಗ ಕರೊನಾ ಸೋಂಕಿನ ಲಕ್ಷಣ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net