ಕರೊನಾ ಸೋಂಕು ದೃಢ ; ಗೌರಿಬಿದನೂರು ಗಡಿ ಬಂದ್ ಆಗುತ್ತಾ?

IMG_20200321_170712
Published on

ಮಧುಗಿರಿ: ಮಹಾಮಾರಿ ಕರೊನಾ ಸೋಂಕು ನೆರೆಯ ಗೌರಿಬಿದನೂರು ತಾಲೂಕು ಪ್ರವೇಶಿಸಿದ್ದು, ಸಹಜವಾಗಿ ಮಧುಗಿರಿ ತಾಲೂಕಿನಲ್ಲಿ ಆತಂಕಕ್ಕೀಡು ಮಾಡಿದೆ. ಶನಿವಾರ ಮೆಕ್ಕಾ ಪ್ರವಾಸ ಕೈಗೊಂಡಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಮಧುಗಿರಿಯಿಂದ 37 ಕಿ.ಮೀ., ದೂರದ ಗೌರಿಬಿದನೂರಿಗೆ ಪ್ರತಿನಿತ್ಯ ನೂರಾರು ಜನರು ಓಡಾಡುವುದರಿಂದ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಸಹಜವಾಗಿ ಸವಾಲು ಎದುರಾಗಿದೆ.

ಗೌರಿಬಿದನೂರಿನಲ್ಲಿ ಸೋಂಕು ದೃಢಪಟ್ಟಿರುವುದು ಗಡಿಬಂದ್ ಮಾಡುವ ಬಗ್ಗೆ ಜಿಲ್ಲಾಡಳಿತ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಗೌರಿಬಿದನೂರಿನಿಂದ ಜಿಲ್ಲೆಗೆ ಬರುವ ಸಾರಿಗೆ ಬಸ್‌ಗಳನ್ನು ಶನಿವಾರ ಮಧ್ಯಾಹ್ನದಿಂದಲೇ ಸ್ಥಗಿತಗೊಳಿಸಲಾಗಿದೆ. ಖಾಸಗಿ ವಾಹನಗಳು ಈ ಮಾರ್ಗದಲ್ಲಿ ಓಡಾಡುವುದರಿಂದ ಸೋಂಕು ಹರಡದಂತೆ ತಡೆಗಟ್ಟುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಲಿದೆ.

ಕರೊನಾ ಪಾಸಿಟಿವ್ ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು ಗಡಿಬಂದ್ ಮಾಡುವ ಬಗ್ಗೆ ಗಂಭೀರ ಪರಿಶೀಲನೆಯಲ್ಲಿ ತೊಡಗಿದೆ. ಈಗ ನೆರೆಯ ತಾಲೂಕಿನ ಜತೆ ಸಂಪರ್ಕ ಕಡಿತಗೊಳಿಸಿಕೊಂಡು ಜಿಲ್ಲೆಯ ಜನರೇ ಕರೊನಾ ಹೋರಾಟಕ್ಕೆ ಕೈಜೋಡಿಸಬೇಕಿದೆ.

ಐಸೋಲೇಶನ್ ವಾರ್ಡ್!: ಕರೊನಾ ಸಂಬಂಧಿಸಿದಂತೆ ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 2 ಹಾಸಿಗೆಗಳ ಪ್ರತ್ಯೇಕ ಐಸೋಲೇಶನ್ ವಾರ್ಡ್ ತೆರೆಯಲಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಚೀಟಿ ವಿತರಿಸುವ ಸ್ಥಳದಲ್ಲೇ ಮೈಕುಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನತೆ ನಿರಂತರವಾಗಿ ಸ್ವಚ್ಛತೆಗೆ ಆದ್ಯತೆ ನೀಡಿ, ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛವಾಗಿಟ್ಟುಕೊಳ್ಳಿ.

ಎಚ್ಚೆತ್ತುಕೊಳ್ಳದ ಪುರಸಭೆ? : ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಶುಚಿತ್ವಕ್ಕೆ ಒತ್ತುಕೊಡಬೇಕಿದ್ದು ಮಧುಗಿರಿ ಪುರಸಭೆ ಸ್ವಚ್ಛತೆಗೆ ಆದ್ಯತೆ ಕೊಟ್ಟಿಲ್ಲ. ಜನತೆಗೆ ಅರಿವು ಮೂಡಿಸುವ ಬಗ್ಗೆ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ನೆರೆಯ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಕರೊನಾ ವಿರುದ್ಧ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಅಲ್ಲಿನ ಮುಖ್ಯಾಧಿಕಾರಿ ಲೋಹಿತ್ ಅವರೇ ಖುದ್ದು ನಿಂತು ಜನನಿಬಿಡ ಪ್ರದೇಶಗಳೂ ಸೇರಿದಂತೆ ಪ್ರತಿ ವಾರ್ಡ್‌ಗಳಲ್ಲೂ ಎಲ್ಲ ಮನೆಗಳ ಆವರಣದಲ್ಲಿ ಮೆಲಸಿನ್ ದ್ರಾವಣ ಸಿಂಪಡಿಸಿ ಕರೊನಾ ವೈರಸ್ ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವುದಕ್ಕೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಹ ಯಾವುದೇ ಪ್ರಯತ್ನಗಳನ್ನೂ ಮಧುಗಿರಿ ಪುರಸಭೆ ವತಿಯಿಂದ ಹಮ್ಮಿಕೊಂಡಿಲ್ಲ.

ಬಸ್ ಸಂಚಾರ ಸ್ಥಗಿತ? : ಮಧುಗಿರಿ-ಗೌರಿಬಿದನೂರು ಬಸ್ ಸಂಚಾರ ಸ್ಥಗಿತಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ ‘ವಿಜಯವಾಣಿ’ಗೆ ತಿಳಿಸಿದರು.

ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಗಂಭೀರ ಸಮಸ್ಯೆ ಹೊರತುಪಡಿಸಿ ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಬರುವುದು ಬೇಡ. ಇದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ಡಾ.ರತ್ನಾವತಿ ಸಾರ್ವಜನಿಕ ಆಸ್ಪತ್ರೆ ವೈದ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net