

ತುಮಕೂರು: ಜಿಲ್ಲೆಯೆಲ್ಲೆಡೆಯೂ ಕರೊನಾ ಸೋಂಕಿನ ಲಕ್ಷಣಗಳಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತದ ನೆಮ್ಮದಿ ಕೆಡಿಸಿದೆ. ಶುಕ್ರವಾರ ಒಂದೇ ದಿನ ದಾಖಲೆಯ 2021 ಜನರಲ್ಲಿ ಸೋಂಕು ದೃಢವಾಗಿದ್ದು ಪರೀಕ್ಷೆ ಮಾಡಿಸಿಕೊಳ್ಳದೆ ಉಳಿದವರ ಸಂಖ್ಯೆಯೂ ಹೆಚ್ಚಾಗಿದೆ.
ತುಮಕೂರು ತಾಲೂಕಿನಲ್ಲಿ 922, ಶಿರಾ 344, ಮಧುಗಿರಿ 122, ಚಿಕ್ಕನಾಯಕನಹಳ್ಳಿ 118, ಗುಬ್ಬಿ 89, ಕೊರಟಗೆರೆ 93, ಕುಣಿಗಲ್ 52, ತಿಪಟೂರು 88 ಹಾಗೂ ತುರುವೇಕೆರೆ 68 ಒಟ್ಟು 2021 ಜನರಿಗೆ ಒಂದೇ ದಿನ ಸೋಂಕು ದೃಢವಾಗಿದೆ. ವಿವಿಧ ಆಸ್ಪತ್ರೆಯಿಂದ ಗುಣಮುಖರಾದ 1745 ಜನರು ಮನೆಗೆ ವಾಪಸಾಗಿದ್ದು ಸೋಂಕು ಎಲ್ಲೆಡೆಯೂ ವ್ಯಾಪಿಸಿದೆ, ಪ್ರಸ್ತುತ 11024 ಸಕ್ರಿಯ ಪ್ರಕರಣಗಳಿದ್ದು ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು, ತಿಪಟೂರು, ಶಿರಾ ನಗರದಲ್ಲಿ ಬಹುತೇಕರಿಗೆ ಕರೊನಾ ರೋಗ ಲಕ್ಷಣಗಳಿದ್ದರೂ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳುವವರ ಸಂಖ್ಯೆ ಕಡಿಮೆಯಿದೆ. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದು ಸೋಂಕು ಎಲ್ಲೆಡೆಯೂ ಹರಿದಾಡಲಾರಂಭಿಸಿದೆ. ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಸುಲಭವಾಗಿ ಸೋಂಕು ಹರಡುತ್ತಿದ್ದು ಮನೆಗಳಿಗೂ ಪ್ರಸಾರವಾಗುತ್ತಿದೆ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ಕನಿಷ್ಟ ಒಂದು ವಾರ ರಜೆ ಘೋಷಿಸಬೇಕು ಎಂಬ ಒತ್ತಾಯ ಪಾಲಕರ ವಲಯದಿಂದ ಕೇಳಿಬಂದಿದೆ.
1057 ಕುಟುಂಬಗಳಿಗೆ 5.28 ಕೋಟಿ ರೂ., ಕರೊನಾ ಪರಿಹಾರ ; ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟ 1057 ಮಂದಿಯ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 1149 ಜನರು ಕರೊನಾಕ್ಕೆ ಬಲಿಯಾಗಿದ್ದು ಮೊದಲ ಹಾಗೂ ಎರಡನೇ ಅಲೆ ವೇಳೆ ಮೃತಪಟ್ಟ 1057 ಮಂದಿಗೆ ರಾಜ್ಯ ಸರ್ಕಾರದ ಪರಿಹಾರ ತಲುಪಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಕರೊನಾದಿಂದ ಮೃತಪಟ್ಟ 1065 ಮಂದಿ ಸಂಪೂರ್ಣ ದಾಖಲೆ ವಿವರಗಳನ್ನು ಆಯಾ ತಾಲೂಕಿನ ಮೂಲಕ ಪಡೆದು ಸಲ್ಲಿಸಲಾಗಿತ್ತು. ಇದರಲ್ಲಿ 1057 ಮಂದಿ ಕುಟುಂಬಸ್ಥರಿಗೆ ಕರೊನಾ ಪರಿಹಾರ ತಲುಪಿದೆ. ಇದರಲ್ಲಿ ತಲಾ 50 ಸಾವಿರ ರೂ., ನೇರ ನಗದು ವರ್ಗಾವಣೆ ಅಡಿ ಅವರ ಕುಟುಂಬದವರಿಗೆ ಒಟ್ಟು 5,28,50,000 ರೂ., ಕರೊನಾ ಪರಿಹಾರ ನೀಡಲಾಗಿದೆ.
1 ಲಕ್ಷ ಹೆಚ್ಚುವರಿ ನೆರವು: ನೇರ ನಗದು ವರ್ಗಾವಣೆ ಅಡಿ 50 ಸಾವಿರ ರೂ., ಅಲ್ಲದೆ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ಹೆಚ್ಚುವರಿ ಕರೊನಾ ಪರಿಹಾರವನ್ನು ಸಹ ನೀಡಲಾಗಿದೆ. ಜಿಲ್ಲೆಯಲ್ಲಿ ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) 705 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು ಈ ಬಿಪಿಎಲ್ ಕುಟುಂಬಗಳಿಗೆ ಹೆಚ್ಚುವರಿ 1 ಲಕ್ಷ ರೂ.,ಗಳನ್ನು ಚೆಕ್ ರೂಪದಲ್ಲಿ ಪರಿಹಾರ ನೀಡಲಾಗಿದೆ. 7.05 ಕೋ.ರೂ., ಹೆಚ್ಚುವರಿ ಪರಿಹಾರ ಕೂಡ ಬಿಪಿಎಲ್ ಮೃತರ ಕುಟುಂಬಸ್ಥರಿಗೆ ನೀಡಲಾಗಿದೆ.
ಜಿಲ್ಲೆಯಲ್ಲಿ 8 ಮಂದಿಗೆ ವಿವಿಧ ತಾಂತ್ರಿಕ ಕಾರಣಗಳಿಂದ ಕರೊನಾ ಪರಿಹಾರ ತಲುಪಿಲ್ಲ. ಕೆಲವರು ನೆರೆಯ ಆಂಧ್ರಗೆ ಸೇರಿದವರಾಗಿದ್ದರಿಂದ ಅವರಿಗೆ ರಾಜ್ಯ ಸರ್ಕಾರದ ಪರಿಹಾರ ದೊರೆತಿಲ್ಲ. ಇನ್ನುಳಿದಂತೆ ಜಿಲ್ಲಾಡಳಿತದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕೊರನಾ ಮೊದಲ ಹಾಗೂ 2ನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಕೋವಿಡ್ ಪರಿಹಾರ ಸಿಕ್ಕಿರುವುದು ಸಮಾಧಾನದ ಸಂಗತಿ ಎನಿಸಿದೆ.
ಕರೊನಾ ಸಿಂಡ್ರೋಮ್ ಇರುವರಿಗೂ ಪರಿಹಾರ? : 700ಕ್ಕೂ ಹೆಚ್ಚು ಮಂದಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲಾಗಿದೆ. ಇವುಗಳಲ್ಲಿ ಕರೊನಾ ಸಿಂಡ್ರೋಮ್ ಇರುವ ಪ್ರಕರಣಗಳನ್ನು ಪರಿಹಾರಕ್ಕೆ ಪರಿಗಣಿಸಲು ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ಕೂಡ ರಚಿಸಲಾಗಿದ್ದು ಅದನ್ನು ಆಧರಿಸಿ ಪರಿಹಾರಕ್ಕೆ ಅರ್ಹ ಕುಟುಂಬಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾಹಿತಿ ನೀಡಿದ್ದಾರೆ.
3ನೇ ಅಲೆ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗದೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ವೈದ್ಯಕೀಯ ವೆಚ್ಚವಾಗಲಿ, ಕರೊನಾ ಸಾವಿನ ಪರಿಹಾರ ಆಗಲಿ ಈ ಬಾರಿ ಸಿಗುವುದಿಲ್ಲ. ಸರ್ಕಾರಿ ಸೌಲಭ್ಯ ಪಡೆಯಬೇಕಾದರೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಕಡ್ಡಾಯ. ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ