

ತುಮಕೂರು: ಬರೊಬ್ಬರಿ 2 ತಿಂಗಳ ನಂತರ ಮಂಗಳವಾರ ಜಿಲ್ಲೆಯಲ್ಲಿಯೂ ಸಾರ್ವಜನಿಕ ಸಾರಿಗೆ ಕಾರ್ಯಾರಂಭ ಮಾಡಿತು. ಆದರೆ, ಬಸ್‌ನಲ್ಲಿ ಜನ ಇದ್ದಾರೊ ಇಲ್ಲವೊ ಎಂಬಂತೆ ಭಾಸವಾಯಿತು.
ಬಸ್ ನಿಲ್ದಾಣಗಳಲ್ಲಿ ಎಲ್ಲ ಹೊಸ ಅನುಭನ ಚಿತ್ರ, ವಿ-ಚಿತ್ರ ಸಂವೇದನೆಗಳು ಬಸ್ ಹತ್ತುವ ಮುಂಚೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿತ್ತು. ಮೂವತ್ತು ಜನರಿಗೆ ಮಾತ್ರ ಅವಕಾಶವಿದ್ದ ಬಸ್‌ನಲ್ಲಿ ಪ್ರಯಾಣಿಕರು ಆಧಾರ್ ಸಂಖ್ಯೆ ಸಮೇತ ಎಲ್ಲ ಮಾಹಿತಿಯನ್ನು ದಾಖಲಿಸಿ ಪ್ರಯಾಣಿಸಿದರು.
ಜಿಲ್ಲೆಯಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು ಮತ್ತಿತರ ಭಾಗಗಳಿಗೆ 137 ಬಸ್ ಸಂಚರಿಸಿದ್ದು, ತುಮಕೂರು ನಗರ ಸಾರಿಗೆಗೆ ಜನರ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಜನರು ಭಯದಲ್ಲಿಯೇ ಬಸ್‌ನಲ್ಲಿ ಸಂಚರಿಸಿದರು.
ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಬಸ್ ಸಂಚಾರಕ್ಕೆ ಅವಕಾಶವಿದ್ದು, ತುಮಕೂರು ಜಿಲ್ಲೆಯಲ್ಲಿ ಸಂಜೆ 5.30ರವರೆಗೂ ಬಸ್ ಸೇವೆ ಲಭ್ಯವಿತ್ತು. ನಂತರ ಆರಂಭವಾಗುವ ಬಸ್‌ಗಳು ಸಂಜೆ 7ರೊಳಗೆ ನಿಗದಿತ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಕಾರಣಕ್ಕೆ ಬೇಗವೇ ಸಂಚಾರ ನಿಲ್ಲಿಸಲಾಯಿತು.
ತುಮಕೂರು ನಗರದಲ್ಲಿ ಬೆರಳೆಣಿಕೆ ಆಟೋರಿಕ್ಷಾಗಳು ಸಂಚರಿಸಿದವು ಒಬ್ಬ ಪ್ರಯಾಣಿಕರನ್ನು ಮಾತ್ರ ಕೂರಿಸಿಕೊಂಡು ಪ್ರಯಾಣಿಸಿದ ತುತ್ತಿನ ಚೀಲ ತುಂಬಿಸಿಕೊಳ್ಳಲು ಕರೊನಾ ವೈರಸ್ ಭಯದ ನಡುವೆಯೂ ರಸ್ತೆಗಿಳಿದಿದ್ದರು. ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಧೈರ್ಯವನ್ನು ಬಹುತೇಕರು ತೋರಲಿಲ್ಲ, ಅನಿವಾರ್ಯತೆ ಇದ್ದವರು ಮಾತ್ರ ಆಟೋ ಹತ್ತಿದರು.
ಥರ್ಮಲ್ ಸ್ಕಾೃನರ್ ಅಭಾವ! : ಎಲ್ಲ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದೇಹದ ಉಷ್ಣಾಂಷ ಪತ್ತೆಹಚ್ಚಲು ಥರ್ಮಲ್ ಸ್ಕಾೃನರ್ ಅಳವಡಿಸುವುದು ಕಡ್ಡಾಯವಾಗಿದ್ದು ಜಿಲ್ಲೆಯಲ್ಲಿ ವಿವಿಧ ಬಸ್ ನಿಲ್ದಾಣದಲ್ಲಿ ಅಳವಡಿಸಲು 22 ಯಂತ್ರಗಳು ಅಗತ್ಯವಿದೆ.
ಕೆಎಸ್‌ಆರ್‌ಟಿಸಿ 5015ರೂ. ಬೆಲೆ ಬಾಳುವ 15 ಯಂತ್ರಗಳನ್ನು ಸಂಚಾರ ಆರಂಭಿಸುವ ಪೂರ್ವದಲ್ಲಿ ಕೊಂಡುಕೊಂಡಿದ್ದು, ಮತ್ತಷ್ಟು ಯಂತ್ರಗಳ ಅವಶ್ಯಕತೆ ಕಂಡುಬಂದ ಹಿನ್ನೆಲೆಯಲ್ಲಿ ಪೂರೈಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದೆ. ಜನದಟ್ಟಣೆ ಇರುವ ಬಸ್ ನಿಲ್ದಾಣದಲ್ಲಿ ಕನಿಷ್ಠ ಮೂರು ಥರ್ಮಲ್ ಸ್ಕಾೃನರ್ ಅವಶ್ಯವಿದ್ದು ಸ್ವಂತ ಹಣದಲ್ಲಿಯಾದರೂ ಕೊಂಡು ಕೊಂಡು ಪ್ರಯಾಣಿಕರಿಗೆ ಬಸ್ ಸೇವೆ ನೀಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.
28ಕ್ಕೆ ತ್ರೈಮಾಸಿಕ ಕೆಡಿಪಿ ಸಭೆ: ಕರೊನಾ ಆತಂಕದ ನೆಪದಲ್ಲಿ ಸರ್ಕಾರಿ ಆಡಳಿತ ಹಳಿ ತಪ್ಪಿದ್ದು, ಇದನ್ನು ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಮೇ 28ರ ಬೆಳಗ್ಗೆ 10.30ಕ್ಕೆ ಜಿಪಂ ಸಭಾಂಗಣದಲ್ಲಿ ನಾಲ್ಕನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಕರೆಯಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿಯೇ ಕೋವಿಡ್ ಹೊರತಾದ ಸೇವೆಯೂ ಆರಂಭ! : ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಾನ್ ಕೋವಿಡ್ ಸೇವೆ ಮೇ 20ರಿಂದ ಲಭ್ಯವಾಗಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ಥಳಾಂತರಿಸಲಾಗಿದ್ದ ಸೇವೆಯನ್ನು ಜಿಲ್ಲಾಸ್ಪತ್ರೆಯಲ್ಲಿಯೇ ಮುಂದುವರಿಸಲು ಕ್ರಮಕೈಗೊಳ್ಳಲಾಗಿದೆ. ಇದೇ ಆಸ್ಪತ್ರೆಯಲ್ಲಿ ಕೋವಿಡ್ ಸೇವೆಯೂ ಪ್ರತ್ಯೇಕವಾಗಿ ಮುಂದುವರಿಯಲಿದೆ.