ಕೋಳಿ ಮಾರುಕಟ್ಟೆಗೆ ಕರೊನಾ ವೈರಸ್ ಕಂಟಕ

18 CRP 01
Published on

ಚನ್ನರಾಯಪಟ್ಟಣ: ವಿಶ್ವವನ್ನೇ ದಂಗು ಬೀಳಿಸುತ್ತಿರುವ ಕರೊನಾ ವೈರಸ್‌ನ ಬಿಸಿ ಕೋಳಿ ಮಾರುಕಟ್ಟೆಗೂ ಬಡಿದಿದ್ದು ಕೋಳಿ ಮಾಂಸದ ಬೆಲೆ ಸದ್ಯ ಪಾತಾಳಕ್ಕೆ ಕುಸಿದಿರುವ ಪರಿಣಾಮ ಕೋಳಿ ಫಾರಂ, ಸಾಗಾಣಿಕೆ ಹಾಗೂ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಕರೊನಾ ವೈರಸ್ ಕುರಿತು ಹಬ್ಬಿರುವ ಕೆಲ ವದಂತಿಗಳಿಂದಾಗಿ ಕಳೆದ ಇಪ್ಪತ್ತು ದಿನಗಳಿಂದ ತಾಲೂಕು ವ್ಯಾಪ್ತಿ ಕೋಳಿ ಮಾರಾಟದ ಅಂಗಡಿಗಳಲ್ಲಿ ಬೆಲೆ ಕುಸಿದಿದ್ದು ಕಳೆದ 15 ವರ್ಷಗಳ ಹಿಂದೆ ಇದ್ದ ಕೋಳಿ ಮಾಂಸದ ಬೆಲೆ ಮರುಕಳಿಸಿದೆ.

ತಿಂಗಳ ಹಿಂದೆ ಕೋಳಿ ಮಾರಾಟ ಧಾರಣೆ ತಲಾ ಕೆ.ಜಿ ಗೆ 90 ರಿಂದ 110 ರೂ. ಬೆಲೆ ಇತ್ತು, ಆದರೆ ಪ್ರಮುಖವಾಗಿ ಕರೊನಾ ಜತೆಗೆ ಮೈಸೂರು ವ್ಯಾಪ್ತಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಪರಿಣಾಮ 35 ರಿಂದ 55 ರೂ.ಗಳಿಗೆ ಕುಸಿದಿದೆ.

ಕೋಳಿ ಮಾಂಸದ ದರ ಕಡಿಮೆ ಇದೆ ಎಂದು ನಾಮಫಲಕ ಹಾಕಿದ್ದು ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ನೀಡಲು ಮುಂದಾದರೂ ಮಾಂಸಹಾರಿಗಳು ಹತ್ತಿರವೂ ಸುಳಿಯದ ಕಾರಣ ಕೋಳಿ ಮಾರುಕಟ್ಟೆ ಹಾಗೂ ಅಂಗಡಿಗಳು ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿವೆ.

ತರಕಾರಿ ಕೊಳ್ಳದಿದ್ದರೂ ಪರವಾಗಿಲ್ಲ ಶನಿವಾರ ಹಾಗೂ ಭಾನುವಾರ ಬಂದಿತೆಂದರೆ ಕೋಳಿ ಅಂಗಡಿಗಳ ಮುಂದೆ ಕೈಚೀಲ ಹಿಡಿದು ಸಾಲಲ್ಲಿ ನಿಂತು ಕೋಳಿ ಮಾಂಸ ಖರೀದಿ ಮಾಡುತಿದ್ದರು. ಆದರೆ ಚಿಕನ್ ಸೇವನೆಯಿಂದ ಕರೊನಾ ವೈರಸ್ ಹರಡುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಿಸಿದ್ದೇ ತಡ ಮಾಂಸಪ್ರಿಯರು ಕೋಳಿ ಅಂಗಡಿಗಳಿಗೆ ಸದ್ಯ ಗುಡ್ ಬೈ ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಹೂರ್ತಕ್ಕಿಂತ ಬೀಗರೂಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು . ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯ ಜತೆಯಲ್ಲಿಯೇ ಬೀಗರೂಟಕ್ಕೆ ಕರೆಯುವುದು ವಾಡಿಕೆಯಾಗಿತ್ತು ಆದರೆ, ವದಂತಿಗಳ ನಡುವೆ ಸಿಲುಕಿರುವ ಜನತೆ ಬೀಗರೂಟದಿಂದ ದೂರ ಉಳಿಯುವ ಸಲುವಾಗಿ ಮಹೂರ್ತಕ್ಕೆ ಕುಟುಂಬ ಸಮೇತ ಧಾವಿಸಿ ಮುಖ ತೋರಿಸಿ ಬೀಗರೂಟಕ್ಕೆ ಬರುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸುವ ಮೂಲಕ ಮಾಂಸಹಾರ ಸೇವನೆಗೆ ಸದ್ಯ ಬ್ರೇಕ್ ಹಾಕುತಿದ್ದಾರೆ.

ಮೇಕೆ, ಕುರಿ, ನಾಟಿ ಕೋಳಿಗೆ ಭೇಡಿಕೆ: ಕರೊನಾ ವೈರಸ್ ಭೀತಿಯಿಂದ ಕೋಳಿ ಮಾರುಕಟ್ಟೆಗೆ ತಲೆ ಹಾಕದ ಜನತೆ ಸದ್ಯ ಹೆಚ್ಚು ಬೆಲೆ ನೀಡಿದರೂ ಪರವಾಗಿಲ್ಲ ಎನ್ನುವಂತೆ ಮೇಕೆ, ಕುರಿ ಹಾಗೂ ನಾಟಿ ಕೋಳಿ ಮಾಂಸದ ಕಡೆಗೆ ಮುಖ ಮಾಡಿದ್ದಾರೆ, ಇದರಿಂದ ಮೇಕೆ, ಕುರಿ ಹಾಗೂ ನಾಟಿ ಕೋಳಿ ಸಾಕಿರುವವರಿಗೆ ಇನ್ನಲ್ಲದ ಬೇಡಿಕೆ ಬಂದಂತಾಗಿದೆ, 250 ರಿಂದ 300 ರೂ. ಬೆಲೆಯಿದ್ದ ನಾಟಿ ಕೋಳಿ ಮಾಂಸಕ್ಕೆ ದಿಢೀರ್ 400 ರಿಂದ 500 ರೂ.ಗಳ ಕಡೆ ದಾಪುಗಾಲಿಟ್ಟಿದೆ. ಇನ್ನು ಮೇಕೆ ಹಾಗೂ ಕುರಿ ಮಾಂಸದ ಬೆಲೆ 50, 100 ರೂ. ನಂತೆ ಏರಿಕೆಯೊಂದಿಗೆ ಗಗನ ಮುಟ್ಟುತ್ತಿದೆ.

ಫಾರಂಗಳಲ್ಲಿ ಕೋಳಿ ಇಲ್ಲ: ಒಂದುವರೆ ತಿಂಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ಕರೊನಾ ವೈರಸ್ ವದಂತಿ ದಿನದಿಂದ ದಿನಕ್ಕೆ ಅಬ್ಬರಸಿದ ಪರಿಣಾಮ ತಾಲೂಕು ವ್ಯಾಪ್ತಿಯಲ್ಲಿರುವ ಕೋಳಿ ಫಾರಂಗಳಲ್ಲಿ ಕೋಳಿ ಮರಿಗಳನ್ನು ತಂದು ಸಾಕುವುದನ್ನೇ ನಿಲ್ಲಿಸಿದ್ದು ಯಾವುದೇ ಫಾರಂಗಳಲ್ಲಿ ಕೋಳಿ ದೊರೆಯುತ್ತಿಲ್ಲ, ಚೀನಾ ದೇಶದಲ್ಲಿ ಕೋಳಿಗಳ ಮೂಲಕವೇ ಕರೊನಾ ವೈರಸ್ ಹರಡಲು ಕಾರಣವಾಯಿತು ಎಂಬ ಸುಳ್ಳು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಿಸಿದ ಪರಿಣಾಮ ಕುಕ್ಕುಟೋದ್ಯಮಕ್ಕೆ ಭಾರಿ ಬರೆ ಬಿದ್ದಿದೆ, ಸದ್ಯ ಮಾಂಸಹಾರಿ ಗ್ರಾಹಕರು ಕೋಳಿ ಮಾಂಸ ಖರೀದಿಗೆ ಎಳ್ಳು ನೀರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net