

ಮಧುಗಿರಿ: ಕರೊನಾ ಸೋಂಕು ಬೆಂಗಳೂರಿನಲ್ಲಿ ದಿನೇದಿನೆ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯ 1500ಕ್ಕೂ ಹೆಚ್ಚು ಉಪನ್ಯಾಸಕರು ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳಲು ಹಿಂಜರಿಯುತ್ತಿದ್ದಾರೆ.
ಮೌಲ್ಯ ಮಾಪನಕ್ಕೆ ಒಟ್ಟು 4 ಕೇಂದ್ರಗಳನ್ನು ವಿಭಾಗಿಸಿದ್ದು, ಬೆಂಗಳೂರು ವಿಭಾಗದಲ್ಲಿ ಬರುವ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ ವಿಭಾಗದ ಉಪನ್ಯಾಸಕರು ಬೆಂಗಳೂರಿನ ವಿವಿಧ ಕೇಂದ್ರಗಳಿಗೆ ತೆರಳಬೇಕಿದೆ. ಈ ಮೌಲ್ಯ ಮಾಪನ 15 ದಿನಗಳವರೆಗೂ ನಡೆಯಲಿದೆ.
ಆತಂಕ ಏಕೆ?: ಲಾಕ್‌ಡೌನ್ ತೆರವಾದ ದಿನದಿಂದಲೂ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದುಕೊಂಡಿದ್ದ ಗ್ರೀನ್ ಜೋನ್‌ಗಳು ರೆಡ್ ಜೋನ್‌ಗಳಾಗುತ್ತಿವೆ. ಮೌಲ್ಯಮಾಪನಕ್ಕೆ ವಿವಿಧ ಜಿಲ್ಲೆಗಳ ಉಪನ್ಯಾಸಕರು ಹಾಜರಾಗಲಿದ್ದು, ಒಂದೊಂದು ವಿಷಯಕ್ಕೆ 150ಕ್ಕೂ ಹೆಚ್ಚು ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗವಹಿಸಬೇಕಿದೆ. ಈ ವೇಳೆ ಸಾಮೂಹಿಕವಾಗಿ ಸೋಂಕು ಹರಡುವುದಿಲ್ಲ ಎಂಬುದಕ್ಕೆ ಸರ್ಕಾರ ಗ್ಯಾರಂಟಿ ನೀಡುತ್ತದೆಯೇ? ನಮಗೂ ಕುಟುಂಬಗಳಿದ್ದು, ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಸೋಂಕು ತಗುಲಿ ಕುಟುಂಬದವರಿಗೂ ವ್ಯಾಪಿಸುತ್ತದೆ ಎಂಬ ಭಯದಲ್ಲಿ ಉಪನ್ಯಾಸಕರ ಕುಟುಂಬಗಳಿವೆ. ನಮ್ಮ ರಕ್ಷಣೆ ಯಾರ ಹೊಣೆ ಎಂದು ಉಪನ್ಯಾಸಕರ ಪರವಾಗಿ ಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲು ಇಚ್ಚಿಸದ ಮಧುಗಿರಿಯ ಹಿರಿಯ ಉಪನ್ಯಾಸಕರೊಬ್ಬರು. ಅಲ್ಲದೆ ಮೌಲ್ಯ ಮಾಪನ ಕೇಂದ್ರಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ದೂರದಲ್ಲಿರುವುದು ಮತ್ತಷ್ಟು ತಲೆನೋವು ತಂದಿದೆ.
ಜವಾಬ್ದಾರಿ ಮರೆತ ಅಧಿಕಾರಿಗಳು: ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕಾದ ಇಲಾಖೆಯ ಹಿರಿಯ ಅಧಿಕಾರಿಗಳೂ ಜವಾಬ್ದಾರಿ ಮರೆತು ಮೌನಕ್ಕೆ ಜಾರಿದ್ದು, ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ನಮ್ಮ ಸಮಸ್ಯೆ ಬಗ್ಗೆ ಗಮನಹರಿಸಿ ಸರ್ಕಾರದ ಗಮನಕ್ಕೆ ತಂದು ಪಿಯು ಮೌಲ್ಯ ಮಾಪನವನ್ನು ಆಯಾ ಜಿಲ್ಲೆಗಳಲ್ಲೇ ನಡೆಸುವಂತೆ ಅದೇಶ ಹೊರಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಜಿಲ್ಲೆಗಳಲ್ಲೇ ಮೌಲ್ಯಮಾಪನ ನಡೆಸಿ: ನಮಗೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿಯಿದೆ. ಮೌಲ್ಯಮಾಪನ ನಡೆಸುವುದಿಲ್ಲ ಎನ್ನುತ್ತಿಲ್ಲ. ಮೇ 25ರಿಂದ ಅರ್ಥಶಾಸ್ತ್ರದ ವಿಷಯದ ಮೌಲ್ಯಮಾಪನವು ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆಯುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಪ್ರತಿಷ್ಠಿತವಾದ ಪಿಯು ಕಾಲೇಜುಗಳು, ವಿಶ್ವವಿದ್ಯಾಲಯ ಕೇಂದ್ರಗಳಿದ್ದು, ಸರ್ಕಾರ ಇವುಗಳನ್ನು ಬಳಸಿಕೊಂಡು ಜಿಲ್ಲಾ ವ್ಯಾಪ್ತಿಯಲ್ಲಿ ಮೌಲ್ಯಮಾಪನಕ್ಕೆ ಅನುಕೂಲ ಮಾಡಿಕೊಟ್ಟಲ್ಲಿ ನಿರ್ಭೀತಿ ಮತ್ತು ನೆಮ್ಮದಿಯಿಂದ ಮೌಲ್ಯಮಾಪನ ನಡೆಸುತ್ತೇವೆ ಎನ್ನುತ್ತಾರೆ ಜಿಲ್ಲೆಯ ಉಪನ್ಯಾಸಕರು.
ತುಟಿ ಬಿಚ್ಚದ ಎಂಎಲ್‌ಸಿಗಳು: ವಿಪರ್ಯಾಸವೆಂದರೆ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ನಮಗೆ ರಕ್ಷಣೆ ನೀಡುವ ಜವಾಬ್ದಾರಿ ನಿರ್ವಹಿಸಬೇಕಾದ 14 ಎಂಎಲ್‌ಸಿಗಳು ತುಟಿ ಬಿಚ್ಚದಿರುವುದು ಉಪನ್ಯಾಸಕರನ್ನು ಕೆರಳಿಸಿದೆ, ಈಗಲಾದರೂ ನಮ್ಮ ಪರ ವಕಾಲತ್ತು ವಹಿಸಿ ನಮಗೆ ರಕ್ಷಣೆ ನೀಡಬೇಕು ಎನ್ನುವುದು ಹಲವು ಉಪನ್ಯಾಸಕರ ಮನವಿ.