

ರಾಮನಗರ: ಕರೊನಾ ಭೀತಿಯಿಂದಾಗಿ ಬಹುತೇಕ ಚಟುವಟಿಕೆಗಳು ಬಂದ್ ಆಗಿವೆ. ಸರ್ಕಾರ ಹಂತ ಹಂತವಾಗಿ ಒಂದಿಷ್ಟು ವಿನಾಯಿತಿಗಳನ್ನು ನೀಡುತ್ತಿದೆ. ಆದರೆ ಅತಿ ಶೀಘ್ರದಲ್ಲಿಯೇ ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವುದು ಅನುಮಾನ.
ಬಹುತೇಕ ಗ್ರಾಪಂಗಳ ಅವಧಿ ಜೂನ್ ಕೊನೆಗೆ ಅಂತ್ಯವಾಗಲಿದೆ. ಆ ಹೊತ್ತಿಗೆ ಹೊಸದಾಗಿ ಚುನಾವಣೆ ನಡೆದು ಮೀಸಲಾತಿ ಪ್ರಕಟಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಬೇಕು. ಆದರೆ ಕರೊನಾದಿಂದಾಗಿ ಚುನಾವಣೆ ನಡೆಯುವುದು ಅನುಮಾನ. ಇದರಿಂದಾಗಿ ಜೂನ್ ನಂತರ ಗ್ರಾಪಂಗಳ ಚಟುವಟಿಕೆಗಳನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಗ್ರಾಪಂಗಳ ಚುನಾವಣೆ ನಡೆಯದಿದ್ದರೆ ಸಾಮಾನ್ಯವಾಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಕರೊನಾ ಸನ್ನಿವೇಶದಲ್ಲಿ ಆಡಳಿತಾಧಿಕಾರಿ ಎಷ್ಟರ ಮಟ್ಟಿಗೆ ಕಾರ್ಯ ಚಟುವಟಿಕೆ ನಡೆಸಬಹುದು ಎನ್ನುವುದು ಪ್ರಶ್ನೆಯಾಗುತ್ತದೆ.
ಕಾನೂನಿನಲ್ಲಿ ಇಲ್ಲ ಅವಕಾಶ?: ಆರ್‌ಡಿಪಿಆರ್ ಕಾಯ್ದೆಯಲ್ಲಿ 5 ವರ್ಷ ಪೂರೈಸಿದ ಪ್ರತಿನಿಧಿಗಳನ್ನು, ಸಂಸ್ಥೆಯನ್ನು ಮುಂದುವರಿಸಲು ಅವಕಾಶ ಇಲ್ಲ. ಒಂದು ವೇಳೆ ಮುಂದುವರಿಸಬೇಕಾದರೆ ಸದನದಲ್ಲಿ ಮಂಡಿಸಿ ಕಾನೂನಿಗೆ ತಿದ್ದುಪಡಿ ತಂದು ಅಧಿಕಾರ ನೀಡಬಹುದಾಗಿದೆ. ಇಲ್ಲವೇ ಸುಗ್ರೀವಾಜ್ಞೆ ಮೂಲಕ ವಿಸ್ತರಣೆ ಮಾಡಬಹುದಾಗಿದೆ. ಇದರ ಹೊರತಾಗಿ ಚುನಾಯಿತರ ಅಧಿಕಾರ ಅಂತ್ಯವಾಗುತ್ತಿದ್ದಂತೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುತ್ತದೆ.
ನಾಮ ನಿರ್ದೇಶನಕ್ಕೆ ಚಿಂತನೆ?: ಮಾಹಿತಿ ಪ್ರಕಾರ ಅವಧಿ ಮುಗಿಯುವ ಗ್ರಾಪಂಗಳಿಗೆ ಆಡಳಿತಾಧಿಕಾರಿ ಜತೆಗೆ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಒಂದು ವರ್ಷ ಚುನಾವಣೆ ನಡೆಸುವುದು ಕಷ್ಟದ ಮಾತಾಗಿರುವುದರಿಂದ ಆಡಳಿತಾಧಿಕಾರಿ ಜತೆಗೆ ಕೆಲ ಸದಸ್ಯರನ್ನು ನಾಮ ನಿರ್ದೇಶನ ಮಾಡಿದರೆ ಸೂಕ್ತ ಎನ್ನುವ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ ಎನ್ನಲಾಗಿದೆ. ಅಲ್ಲದೆ, ಹಾಲಿ ಸದಸ್ಯರನ್ನೇ ಸುಗ್ರೀವಾಜ್ಞೆ ಮೂಲಕ ಮುಂದುವರಿಸುವ ಒತ್ತಡವೂ ಸರ್ಕಾರದ ಮೇಲೆ ಬಿದ್ದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಹೊಸ ಡ್ಯಾಂಗಲ್ ನೀಡಬೇಕು: 14ನೇ ಹಣಕಾಸು ಯೋಜನೆ, ನರೇಗಾ ಕಾಮಗಾರಿಗಳ ವಹಿವಾಟು ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ. ಹಣ ವರ್ಗಾವಣೆಗೆ ಆಯಾ ಗ್ರಾಪಂ ಅಧ್ಯಕ್ಷರ ಬೆರಳಚ್ಚನ್ನು ಹೊಂದಿಸಲಾಗಿರುತ್ತದೆ. ಆದರೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದರಿಂದ ಅವರ ಬೆರಳಚ್ಚು ಪಡೆದು ಮತ್ತೊಂದು ಡ್ಯಾಂಗಲ್ ಸಿದ್ಧಪಡಿಸಲು ತಡವಾಗುತ್ತದೆ ಎನ್ನುವುದು ಹಾಲಿ ಇರುವ ಗ್ರಾಪಂ ಅಧ್ಯಕ್ಷರ ಅಭಿಮತ. ಆದರೆ ವಾರದಲ್ಲಿ ನೂತನ ಡ್ಯಾಂಗಲ್ ಸಿದ್ಧಪಡಿಸಿಕೊಡಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಚಟುವಟಿಕೆ ಮೇಲೆ ಪರಿಣಾಮ: ಚುನಾವಣೆ ನಡೆಯದಿದ್ದರೆ ಗ್ರಾಪಂ ಚಟುವಟಿಕೆ ಮೇಲೆ ಪರಿಣಾಮ ಬೀರಲಿದೆ. 14ನೇ ಹಣಕಾಸು ಯೋಜನೆಗಳ ಮೂಲಕ ಕೈಗೊಳ್ಳುವ ಕಾಮಗಾರಿಗಳು ಮತ್ತು ನರೇಗಾ ಯೋಜನೆ ಸೇರಿ ವಿವಿಧ ಯೋಜನೆಗಳ ಚಟುವಟಿಕೆಗಳು ನಡೆಯುತ್ತವೆ. ಇದರಲ್ಲಿ ಪ್ರಮುಖವಾಗಿ 14ನೇ ಹಣಕಾಸು ಮತ್ತು ನರೇಗಾ ಯೋಜನೆ ಹಣ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಲಾನುಭವಿಗಳು ಮತ್ತು ಗುತ್ತಿಗೆದಾರರ ಖಾತೆಗೆ ಜಮೆಯಾಗುತ್ತದೆ. ಆನ್‌ಲೈನ್ ಮೂಲಕ ಹಣ ಸಂದಾಯವಾಗಬೇಕಾದರೆ, ಆಯಾ ಗ್ರಾಪಂಗಳ ಅಧ್ಯಕ್ಷರ ಬೆರಳಚ್ಚು ನೀಡಬೇಕು. ಇಲ್ಲವಾದರೆ ಹಣ ಖಾತೆಗೆ ಸೇರುವುದಿಲ್ಲ. ಸರ್ಕಾರ ಕೂಡಲೇ ಸ್ಪಷ್ಟ ನಿರ್ದೇಶನ ಕೈಗೊಂಡು, ನರೇಗಾ, 14ನೇ ಹಣಕಾಸು ಯೋಜನೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಜೂನ್ ವೇಳೆಗೆ ಅಧಿಕಾರ ಅವಧಿ ಮುಗಿಯುತ್ತದೆ. ನಂತರ ಗ್ರಾಪಂ ಚಟುವಟಿಕೆ ಸ್ತಬ್ಧವಾಗುತ್ತದೆ. ಆಡಳಿತಾಧಿಕಾರಿ ನೇಮಕಕ್ಕಿಂತ ಹಾಲಿ ಇರುವವರನ್ನೇ ಮುಂದುವರಿಸಿದರೆ ಕರೊನಾ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಎಂ.ಆರ್.ರಮೇಶ್ ಅಧ್ಯಕ್ಷ, ಲಕ್ಷ್ಮೀಪುರ ಗ್ರಾಪಂ