ಆಸ್ಪತ್ರೆಗಳಲ್ಲಿ ಆಮ್ಲಜನಕ, ಔಷಧ ಕೊರತೆ ; ಜಿಲ್ಲೆಯಲ್ಲಿ ಮಿತಿಮೀರಿದ ಸೋಂಕು ; ಕರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಅಸಹಾಯಕತೆ

DSC_8895
Published on

ತುಮಕೂರು : ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಮಿತಿಮೀರಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಗೂ ಔಷಧ ಕೊರತೆಯಿದೆ ಎಂಬ ಭಯಾನಕ ಸತ್ಯವನ್ನು ಜಿಲ್ಲಾಡಳಿತ ಬಾಯ್ಬಿಟ್ಟಿದೆ.

ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ಸಾರ್ವತ್ರಿಕ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ದಿಢೀರ್ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಕರೊನಾ ಸೋಂಕಿತರ ಸಂಖ್ಯೆ ಹಾಗೂ ಆಸ್ಪತ್ರೆಗಳ ಸ್ಥಿತಿಗತಿ ತಿಳಿದು ಕ್ಷಣಕಾಲ ಮೌನರಾದರು.

ಕರೊನಾ ರೋಗಿಗಳಿಗೆ ನೀಡಲಾಗುವ ರೆಮಿಡಿಸಿವಿರ್ ಔಷಧ ಹಾಗೂ ಆಮ್ಲಜನಕದ ಕೊರತೆ ಕಾರಣಕ್ಕೆ ರೋಗಿಗಳನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ ಎಂದು ಶ್ರೀದೇವಿ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ.ಎಂ.ಆರ್.ಹುಲಿನಾಯ್ಕರ್ ಗಮನ ಸೆಳೆದರು. ಶ್ರೀಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಪರಮೇಶ್ ಕೂಡ ಆಮ್ಲಜನಕ ಪೂರೈಸಿದರೆ ಚಿಕಿತ್ಸೆಗೆ ನಾವು ಸಿದ್ಧ ಎಂದರು.

ಪ್ರತಿನಿತ್ಯ ಜಿಲ್ಲೆಯಲ್ಲಿ ಕನಿಷ್ಠ 20 ಕಿಲೋ ಲೀಟರ್ ಆಮ್ಲಜನಕ ಅಗತ್ಯವಿದ್ದು, ಜಿಲ್ಲಾಸ್ಪತ್ರೆ ಹಾಗೂ ಶ್ರೀದೇವಿ ಕಾಲೇಜಿನಲ್ಲಿ 12 ಕಿಲೋ ಲೀಟರ್ ಉತ್ಪಾದನೆ ಸಾಧ್ಯವಾಗಿದೆ, ಉಳಿದ ಆಮ್ಲಜನಕ ಸಕಾಲದಲ್ಲಿ ಸರಬರಾಜು ಆಗದೆ 4 ದಿನದಿಂದ ಸಮಸ್ಯೆಯಾಗಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಬಾಯ್ಬಿಟ್ಟರು.

ಜಿಂದಾಲ್ ಸಂಸ್ಥೆಯಿಂದ ಸರಬರಾಜಾದರೆ ಆಮ್ಲಜನಕದ ಕೊರತೆ ನೀಗಲಿದೆ ಇಲ್ಲವಾದರೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಆಮ್ಲಜನಕ ಸಿಕ್ಕರಷ್ಟೇ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕರೊನಾ ಪರೀಕ್ಷೆ ಹಾಗೂ ವರದಿ ಬರಲು ತಡವಾಗುತ್ತಿರುವ ಬಗ್ಗೆಯೂ ಅಸಮಾಧಾನ ಹೊರಹಾಕಿದ ಸಚಿವರು ಅಗತ್ಯ ಕ್ರಮವಹಿಸಬೇಕು, ಟೆಸ್ಟ್ ಸಂಖ್ಯೆ ಹೆಚ್ಚಿಸಬೇಕು ಎಂದರು.

ರಾಟ್ ಪರೀಕ್ಷೆಯಲ್ಲಿ 100 ಜನರ ಪೈಕಿ 30 ಜನರಿಗೆ ಸೋಂಕು ದೃಢವಾಗುತ್ತಿದೆ, ಲ್ಯಾಬ್‌ಗಳಲ್ಲಿಯೂ ಪಾಸಿಟಿವ್ ದರ ಶೇ.20 ಇದೆ, ಜನ ಎಚ್ಚರಿಕೆಯಿಂದ ಇರಬೇಕು ಎಂದರು.

ಜಿಲ್ಲೆಯ ಪಾಲಿನ ಔಷಧ ಮಹಾ ಗಡಿಯಲ್ಲಿ?: ಉಸಿರಾಟದ ತೀವ್ರ ಸಮಸ್ಯೆ ಇರುವವರಿಗೆ ನೀಡಲಾಗುವ ‘ರೆಮಿಡಿಸಿವಿರ್’ ಇಂಜೆಕ್ಷನ್ ಕೊರತೆ ಉಂಟಾಗಿದೆ. ಆದರೆ, ಜಿಲ್ಲೆಗೆ ಪೂರೈಸಲಾಗುವ ಔಷಧ ಮಹಾರಾಷ್ಟ್ರ ಗಡಿಯಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಸಹಾಯಕ ಔಷಧ ನಿಯಂತ್ರಕಿ ಮಮತಾ ಮಾಹಿತಿ ನೀಡಿದರು. ಔಷಧ ಕಳ್ಳಸಾಗಣೆ ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು, ಮುಂದೆ ಬಳಸುಲು ಔಷಧದ ಬಗ್ಗೆ ದಿನನಿತ್ಯ ದಾಖಲೆ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಮೃತದೇಹ ಪಡೆಯಲು ಹಿಂದೇಟು: ಕರೊನಾದಿಂದ ಮೃತಪಟ್ಟರೆ ಕುಟುಂಬದವರು ಶವ ಪಡೆಯಲು ಹಿಂದೇಟು ಹಾಕುತ್ತಿರುವ ಆತಂಕಕಾರಿ ವಿಷಯವನ್ನು ಶ್ರೀದೇವಿ ಆಸ್ಪತ್ರೆಯ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು. ಆಸ್ಪತ್ರೆ ವತಿಯಿಂದಲೇ ಅಂತ್ಯಕ್ರಿಯೆ ನಡೆಸುವಂತೆ ಕೋರುತ್ತಾರೆ. ಆದರೆ, ಪಾಲಿಕೆ ವತಿಯಿಂದ ಸಹಕಾರವಿಲ್ಲ ಎಂದು ಗೋಳು ತೋಡಿಕೊಂಡರು.

ಗಾರ್ಡ್‌ನ್ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಮನ ಸೆಳೆದರು. ವಿಷಯ ತಿಳಿದು ಕೆಂಡಾಮಂಡಲರಾದ ಸಚಿವ ಮಾಧುಸ್ವಾಮಿ, ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಸಂಬಳ ನೀಡದ ಸ್ಥಿತಿ ಪಾಲಿಕೆಗೆ ಬಂದಿದೆಯಾ?, ಅಮಾನುಷವಾಗಿ ವರ್ತಿಸಬಾರದು, ಕೆಲಸ ಮಾಡೊರಿಗೆ ರಕ್ಷಣೆ ನೀಡದಿದ್ದರೆ ಹೇಗೆ ಎಂದು ಆಯುಕ್ತೆ ರೇಣುಕಾಗೆ ತರಾಟೆಗೆ ತೆಗೆದುಕೊಂಡರು.

ಸ್ಮಶಾನದ ನಿರ್ವಹಣೆಯನ್ನು ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಹಿಸಿಕೊಳ್ಳಲಿದೆ ಎಂದು ಸಭೆಯಲ್ಲಿದ್ದ ಸಂಸ್ಥೆ ಅಧ್ಯಕ್ಷ ಎನ್.ಎಸ್.ಜಯಕುಮಾರ್ ತಿಳಿಸಿದರು.

ಕೋವಿಡ್ ಕೇರ್ ಸೆಂಟರ್ ಆರಂಭ: ತುಮಕೂರಿನ 17 ವಿವಿಧ ಸ್ಥಳಗಳನ್ನು ಅತೀಸೂಕ್ಷ್ಮ ಎಂದು ಗುರುತಿಸಲಾಗಿದೆಯಾದರೂ ಸೋಂಕಿತರು ಹೊರಗೆ ಓಡಾಡದಂತೆ ನಿರ್ಬಂಧವಿಲ್ಲದಿರುವುದು ಚಿಂತೆ ಹೆಚ್ಚಿಸಿದೆ. ತುಮಕೂರಿನಲ್ಲಿ 2114 ಹಾಗೂ ಜಿಲ್ಲೆಯ ವಿವಿಧ ಭಾಗದಲ್ಲಿ 4560 ಜನರು ಕ್ವಾರಂಟೇನ್‌ನಲ್ಲಿದ್ದು ಅವರಿಗೆ ಸೂಕ್ತ ವೈದ್ಯಕೀಯ ನೆರವು ಹಾಗೂ ಮೂಲಸೌಕರ್ಯ ಕೂಡ ಒದಗಿಸಿಲ್ಲ. ನಗರದ ಎಲ್ಲ ಹಾಸ್ಟೆಲ್ ಹಾಗೂ ಕ್ಯಾತಸಂದ್ರ ಟ್ರಕ್ ಟರ್ಮಿನಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಎಂದು ಸಚಿವರು ಸೂಚಿಸಿದರು.

ಜಿಲ್ಲಾಸ್ಪತ್ರೆಯಲ್ಲಿ 190 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರೂ ಅವರನ್ನು ದೂರದಿಂದಲೇ ವೈದ್ಯರು ನೋಡಿ ವಾಪಸಾಗುತ್ತಿರುವ ಬಗ್ಗೆ ದೂರುಗಳಿವೆ. ಅಮಾನವೀಯವಾಗಿ ನಡೆದುಕೊಂಡರೆ ಸಹಿಸಲ್ಲ ಎಂದರು.

ಕಾರ್ಮಿಕರ ಸಹಾಯವಾಣಿ : ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕ ಇಲಾಖೆ ಕಟ್ಟಡ, ಅಸಂಟಿತ, ಸಂಟಿತ/ವಲಸೆ ಕಾರ್ಮಿಕರು ಸೇರಿ ಇತರ ಎಲ್ಲ ಕಾರ್ಮಿಕರ ಅನುಕೂಲಕ್ಕಾಗಿ ಸಹಾಯವಾಣಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಸುಭಾಷ್ ತಿಳಿಸಿದ್ದಾರೆ.

ಕೆಲಸ ಮಾಡುವ ಸ್ಥಳದಲ್ಲಿ ಅವಶ್ಯಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು, ಕಾರ್ಮಿಕರಿಗೆ ಊಟ, ವಸತಿ, ನೀರು ಹಾಗೂ ಇತರೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಾರ್ಮಿಕರಿಗೆ ಕಾರ್ಯಸ್ಥಳದಲ್ಲಿ ಯಾವುದೇ ರೀತಿಯ ತೊಂದರೆಯಾದಲ್ಲಿ ಸಹಾಯವಾಣಿ 155214 ಅಥವಾ ಸ್ಥಳೀಯ ಕಾರ್ಮಿಕ ನಿರೀಕ್ಷಕರುಗಳ ಕಚೇರಿ, ಜಿಲ್ಲಾ ಕಾರ್ಮಿಕ ಇಲಾಖೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net