ಸೋಂಕು ನಿಯಂತ್ರಿಸಲು ಸಹಕರಿಸಿ ; ಕರೊನಾ ಲಸಿಕೆ ಪಡೆದ ಸಿದ್ದಲಿಂಗ ಶ್ರೀ ಸಲಹೆ

23Tmk_Swamiji_Corona_Lasike
Published on

ತುಮಕೂರು: ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮಂಗಳವಾರ ಕರೊನಾ ಲಸಿಕೆ ಪಡೆದರು. ಮಠದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವರ್ಷದ ಹಿಂದೆ ಕರೊನಾ ಇಡೀ ವಿಶ್ವಕ್ಕೆ ಬಂದಿದ್ದು, ನಿರಂತರ ಪ್ರಯತ್ನದ ಫಲವಾಗಿ ನಮ್ಮ ವಿಜ್ಞಾನಿಗಳು ಔಷಧ ಕಂಡು ಹಿಡಿದಿದ್ದಾರೆ. ಕೋವಿಡ್‌ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು, ಇದೀಗ ಸಾರ್ವಜನಿಕರಿಗೂ ನೀಡಲಾಗುತ್ತಿದೆ. ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬಹುದು ಎಂದರು.

ಈಗ 2ನೇ ಹಂತದ ಕರೊನಾ ಅಲೆ ಕಾಣಿಸಿಕೊಳ್ಳುತ್ತಿದ್ದು, ದಿನೇದಿನೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಾವು ವ್ಯಾಕ್ಸಿನ್ ಪಡೆಯುವುದು ಒಳ್ಳೆಯದು. ನಮ್ಮ ದೇಹದಲ್ಲಿ ಕೋವಿಡ್ ಅಂಶ ಇದ್ದರೆ ಅದನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ. ಜತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಜತೆಗೆ ನಮ್ಮ ಸುತ್ತಮುಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ಸಿದ್ದಲಿಂಗ ಶ್ರೀಗಳು ಕರೊನಾ ಲಸಿಕೆ ಪಡೆದಿದ್ದು ಇದೇ ರೀತಿ ಸಾರ್ವಜನಿಕರೂ ಲಸಿಕೆ ಪಡೆಯುವ ಮೂಲಕ ಈ ಮಹಾಮಾರಿ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕರೊನಾ ನಿರ್ಮೂಲನೆಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಸರ್ಕಾರದಿಂದ ಸಾರ್ವಜನಿಕರಿಗೆ ಲಸಿಕೆ ಕೊಡುವ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಕರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿ ಸರಾಸರಿ 40 ಸೋಂಕಿತರು ಪ್ರತಿದಿನ ಪತ್ತೆಯಾಗುತ್ತಿದ್ದಾರೆ. ಅದರಲ್ಲೂ ತುಮಕೂರು ನಗರ ಪ್ರದೇಶದಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿದೆ. ಹಾಗಾಗಿ, ಸಾರ್ವಜನಿಕರು ಕರೊನಾ ನಿಯಂತ್ರಿಸಲು ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು. ಸಿದ್ಧಗಂಗಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್, ತಾಪಂ ಮಾಜಿ ಸದಸ್ಯ ಎಂ.ಬಿ.ಕುಮಾರ್ ಇದ್ದರು.

ಕರೊನಾ ನಿಯಂತ್ರಣಕ್ಕೆ ಸರ್ಕಾರವು ಗಂಭೀರ ಪ್ರಯತ್ನದಲ್ಲಿ ತೊಡಗಿದೆ. ಸರ್ಕಾರದ ಜತೆಗೆ ನಾವೆಲ್ಲರೂ ಕೈ ಜೋಡಿಸಿ ಸೋಂಕು ನಿಯಂತ್ರಣಕ್ಕೆ ಸಹಕರಿಸೋಣ. ಕರೊನಾ ಲಸಿಕೆ ಚುಚ್ಚುಮದ್ದು ಪಡೆದದ್ದೇ ನನ್ನ ಅರಿವಿಗೆ ಬರಲಿಲ್ಲ. ಎಲ್ಲರೂ ಕರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಒಳಿತು. ಸಿದ್ದಲಿಂಗ ಶ್ರೀಗಳು, ಮಠಾಧ್ಯಕ್ಷರು, ಸಿದ್ಧಗಂಗಾ ಮಠ ಜಿಲ್ಲೆಯಲ್ಲಿ 1.10 ಲಕ್ಷ ಸಾರ್ವಜನಿಕರಿಗೆ, 20 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 11 ಸಾವಿರ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕರೊನಾ ಲಸಿಕೆ ನೀಡಲಾಗಿದೆ. ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net