

ತುಮಕೂರು : ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರೆದಿದೆ. ಸತತ 4ನೇ ದಿನ ಸೋಂಕಿತರ ಸಂಖ್ಯೆ ಸಾವಿರ ದಾಟಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 1731 ಜನರಿಗೆ ಸೋಂಕು ದೃಢವಾಗಿದೆ. ಇಬ್ಬರು ಸೋಂಕಿಗೆ ಬಲಿಯಾಗಿದ್ದು ಕರೊನಾತಂಕ ಹೆಚ್ಚಿದೆ.
ಜ.15 ರಂದು 1326 ಜನರಿಗೆ ಸೋಂಕು ತಗಲಿದ್ದರೆ, 16ರಂದು ಸೋಂಕಿತರ ಸಂಖ್ಯೆ 1373ಕ್ಕೇರಿತು. 17 ರಂದು 1147 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಮಂಗಳವಾರ ಮತ್ತೆ 1731 ಜನರಿಗೆ ಕರೊನಾ ವಕ್ಕರಿಸಿದೆ. ಶಾಲಾ ಮಕ್ಕಳು-ಶಿಕ್ಷಕರಿಗೆ ಸೋಂಕು ಹೆಚ್ಚು ತಗುಲಿದೆಯಾದರೂ ಅಂತಹ ಗಂಭೀರ ಲಕ್ಷಣಗಳಿಲ್ಲದ ಕಾರಣ ಆ ಶಾಲೆಗೆ ಮಾತ್ರ 7 ದಿನಗಳ ರಜೆ ನೀಡಲಾಗುತ್ತಿದೆ. ಉಳಿದಂತೆ
ತಿಪಟೂರಲ್ಲಿ ದ್ವಿಶತಕ ಬಾರಿಸಿದ ಕರೊನಾ: ತುಮಕೂರು ತಾಲೂಕು ಒಂದರಲ್ಲಿಯೇ 484 ಮಂದಿಗೆ ಸೋಂಕು ತಗುಲಿದ್ದು ತಿಪಟೂರಲ್ಲಿ ಕರೊನಾ ದ್ವಿಶತಕ ಬಾರಿಸಿದೆ. ಕುಣಿಗಲ್ ತಾಲೂಕಿನಲ್ಲಿ 186 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಪಾವಗಡ 174, ಕೊರಟಗೆರೆ 164, ಶಿರಾ 159, ಮಧುಗಿರಿ 144, ಗುಬ್ಬಿ ತಾಲೂಕಿನಲ್ಲಿ 107 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಹಜವಾಗಿ ಈ ತಾಲೂಕುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂ ಚಿಕ್ಕನಾಯಕನಹಳ್ಳಿ 60 ಹಾಗೂ ತುರುವೇಕೆರೆಯಲ್ಲಿ 53 ಒಟ್ಟು 1731 ಜನರಿಗೆ ಸೋಂಕು ದೃಢವಾಗಿದೆ. ಸದ್ಯ ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 16 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಬಲಿ: ತುಮಕೂರು ತಾಲೂಕಿನ 90 ವರ್ಷದ ವೃದ್ಧ ಹಾಗೂ ಮಧುಗಿರಿ ತಾಲೂಕಿನ 58 ವರ್ಷದ ವ್ಯಕ್ತಿ ಉಸಿರಾಟ ತೊಂದರೆ, ಜ್ವರದಿಂದ ಬಳಲುತ್ತಿದ್ದು ಕರೊನಾಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಸತ್ತವರ ಸಂಖ್ಯೆ 1146ಕ್ಕೇರಿದೆ.
ವಿವಿಧ ಆಸ್ಪತ್ರೆಗಳಿಂದ 148 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 7960ಕ್ಕೇರಿದೆ. ಈವರೆಗೆ ಜಿಲ್ಲೆಯಲ್ಲಿ 1,29,765 ಜನರಿಗೆ ಸೋಂಕು ತಗುಲಿದಂತಾಗಿದೆ.
ಶೇ.15.40ಕ್ಕೇರಿದ ಪಾಸಿಟಿವಿಟಿ ರೇಟ್ : ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.15.40ಕ್ಕೇರಿದೆ. ಕಳೆದೊಂದು ತಿಂಗಳಲ್ಲಿ ಐವರು ಕರೊನಾಕ್ಕೆ ಬಲಿಯಾಗಿದ್ದಾರೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಆಸ್ಪತ್ರೆ ಸೇರುವ ಗಂಭೀರ ಲಕ್ಷಣಗಳು ಸೋಂಕಿತರಲ್ಲಿ ಕಡಿಮೆ ಇದೆ. ಆಕ್ಸಿಜನ್, ಔಷಧ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ‘ವಿಜಯವಾಣಿ’ಗೆ ತಿಳಿಸಿದರು.
30 ಸಾವಿರ ಕೋವ್ಯಾಕ್ಸಿನ್ ಲಭ್ಯ :ಈವರೆಗೆ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಶೇ.60 ಲಸಿಕೆ ನೀಡಲಾಗಿದೆ. ಜಿಲ್ಲೆಗೆ ಈಗ 30 ಸಾವಿರ ಕೋವ್ಯಾಕ್ಸಿನ್ ಲಸಿಕೆ ಬಂದಿದ್ದು ಇನ್ನುಳಿದ ಮಕ್ಕಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಕ್ರಮವಹಿಸಿದೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಸೋಮವಾರದವರೆಗೆ 308 ವಿದ್ಯಾರ್ಥಿಗಳು, 89 ಶಿಕ್ಷಕರಿಗೂ ಸೋಂಕು ಕಾಣಿಸಿಕೊಂಡಿದೆ. ಯಾರಿಗೂ ಗಂಭೀರ ಲಕ್ಷಣಗಳಿಲ್ಲದ ಕಾರಣ ಎಲ್ಲರೂ ಹೋಂ ಐಸೋಲೇಷನ್‌ನಲ್ಲಿ ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆಯುತ್ತಿದ್ದಾರೆ.
ಮೂವರು ಟಿಎಚ್‌ಒಗಳು, 25 ಸರ್ಕಾರಿ ವೈದ್ಯರಿಗೆ ಸೋಂಕು : 3 ಮಂದಿ ಟಿಎಚ್‌ಒಗಳು, 25 ಸರ್ಕಾರಿ ವೈದ್ಯರು ಸೇರಿ 150ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ಎಲ್ಲರಿಗೂ ಕರೊನಾ ಮಾರ್ಗಸೂಚಿಯಂತೆ ಚಿಕಿತ್ಸೆ , ಐಸೋಲೇಷನ್‌ನಲ್ಲಿರಲು ಸೂಚಿಸಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯಗೆ ಈಗಾಗಲೇ ಸೋಂಕು ತಗುಲಿದ್ದು ಅವರು ಹೋಂಐಸೋಲೇಷನ್‌ನಲ್ಲಿದ್ದಾರೆ.