ಮಕ್ಕಳ ಮೇಲೆ ಕರೊನಾ ಕಣ್ಣು ; 575 ವಿದ್ಯಾರ್ಥಿಗಳು, 48 ಶಿಕ್ಷಕರು, 137 ಆರಕ್ಷಕರಿಗೆ ಸೋಂಕು

10 KKP 2
Published on

ತುಮಕೂರು : ಕರೊನಾ ಕಣ್ಣು ಈಗ ಮಕ್ಕಳ ಮೇಲೆ ಬಿದ್ದಿದ್ದು, ಜಿಲ್ಲೆಯಲ್ಲಿ ಈವರೆಗೆ 575 ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, 48 ಶಿಕ್ಷಕರಿಗೆ ಸೋಂಕು ತಗುಲಿದೆ. 137 ಪೊಲೀಸರಿಗೂ ಕರೊನಾ ವಕ್ಕರಿಸಿದೆ. ಗಂಭೀರವಾದ ರೋಗ ಲಕ್ಷಣಗಳಿಲ್ಲದೇ ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಹೋಂ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13 ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆಯ 35 ಶಿಕ್ಷಕರಿಗೂ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ಹೆಚ್ಚಿರುವ ಶಾಲೆಗಳಿಗೆ 7 ದಿನ ರಜೆ ನೀಡಲಾಗಿದೆ.

1373 ಮಂದಿಗೆ ಸೋಂಕು: ಭಾನುವಾರ ಒಂದೇ ದಿನ 1373 ಜನರಿಗೆ ಸೋಂಕು ಕಾಣಿಸಿದ್ದು, ತುಮಕೂರು ತಾಲೂಕು ಒಂದರಲ್ಲಿಯೇ 753 ಮಂದಿಗೆ ಕರೊನಾ ದೃಢಪಟ್ಟಿದೆ. ಕುಣಿಗಲ್ ತಾಲೂಕಿನಲ್ಲಿ 124 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಶಿರಾ 141 ಜನರಿಗೆ ಸೋಂಕು ತಗುಲಿದೆ. ಪಾವಗಡ ತಾಲೂಕಿನಲ್ಲಿ 88, ಕೊರಟಗೆರೆ 85, ತಿಪಟೂರು 68, ಮಧುಗಿರಿ 45, ತುರುವೇಕೆರೆ 31, ಗುಬ್ಬಿ 24 ಹಾಗೂ ಹಾಗೂ ಚಿ.ನಾ.ಹಳ್ಳಿ 14 ಒಟ್ಟು 1373 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸದ್ಯ ವಿವಿಧ ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

5359 ಸಕ್ರಿಯ ಪ್ರಕರಣಗಳು: ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 56 ಜನರು ಗುಣಮುಖರಾಗಿ ಮನೆಗೆ ಮರಳಿದ್ದು ಈವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 5359ಕ್ಕೇರಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,26,887 ತಲುಪಿದೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ರೋಗ ಲಕ್ಷಣಗಳು ಇಲ್ಲದಿದ್ದರೂ ಸೋಂಕು ಖಚಿತವಾಗುತ್ತಿದೆ.

137 ಪೊಲೀಸರಿಗೆ ಸೋಂಕು : ಜಿಲ್ಲೆಯಲ್ಲಿ 137 ಪೊಲೀಸರಿಗೆ ಸೋಂಕು ತಗುಲಿದೆ. ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ್ದ ಪೊಲೀಸರು ಎರಡು ಡೋಸ್ ಲಸಿಕೆ ಜತೆ ಬಹುತೇಕರು ಬೂಸ್ಟರ್ ಡೋಸ್ ಕೂಡ ಪಡೆದಿದ್ದರು. ಕಳೆದೊಂದು ವಾರದಿಂದ ಸೋಂಕಿತ ಪೊಲೀಸರ ಸಂಖ್ಯೆ ಹೆಚ್ಚುತ್ತಿದ್ದು, ಸಂಚಾರಿ ಠಾಣೆಯ 12 ಪೊಲೀಸರು ಸೇರಿ 137 ಪೊಲೀಸರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ ಮೇಕೆದಾಟು ಪಾದಯಾತ್ರೆ ಭದ್ರತೆಗೆ ತೆರಳಿದ್ದ ಡಿಎಆರ್ ಸಿಬ್ಬಂದಿಯಲ್ಲಿ ಡಿವೈಎಸ್ಪಿ ಗೋವಿಂದರಾಜು ಸೇರಿ 19 ಸಿಬ್ಬಂದಿಗೆ ಸೋಂಕು ತಗುಲಿದೆ.

ಮಾಜಿ ಶಾಸಕ ರಾಜಣ್ಣಗೆ ಪಾಸಿಟಿವ್ : ಮೇಕೆದಾಟು ಪಾದಯಾತ್ರೆಗೆ ತೆರಳಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರಗೂ ಸೋಂಕು ದೃಢಪಟ್ಟಿದ್ದು, ಮಾಜಿ ಶಾಸಕ ಕೆ.ಎನ್.ರಾಜಣ್ಣಗೂ ಪಾಸಿಟಿವ್ ಆಗಿದೆ. ಇಬ್ಬರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ದಿನ 1373 ಜನರಿಗೆ ಕರೊನಾ : ತುಮಕೂರು ಜಿಲ್ಲೆಯಲ್ಲಿ ಭಾನುವಾರ ಕೂಡ 1373 ಜನರಿಗೆ ಕರೊನಾ ದೃಢವಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5359 ಕ್ಕೇರಿದೆ. ಈ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ ಆದರೆ, ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಎಂಟು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್, ಶಿರಾದಲ್ಲಿಯೂ ಭಾನುವಾರ ಸೋಂಕಿತರ ಸಂಖ್ಯೆ ಶತಕದಾಟಿದ್ದು ಜನರು ಮತ್ತಷ್ಟು ಎಚ್ಚರಿಕೆವಹಿಸುವ ಅಗತ್ಯವಿದೆ. ತುಮಕೂರು 753, ತಿಪಟೂರು 68, ಕುಣಿಗಲ್ 124, ಮಧುಗಿರಿ 45, ಕೊರಟಗೆರೆ 85, ಶಿರಾ 141, ಗುಬ್ಬಿ 24, ಚಿ.ನಾ.ಹಳ್ಳಿ 14, ಪಾವಗಡ 88 ಹಾಗೂ ತುರುವೇಕೆರೆ 31 ಒಟ್ಟು 1373 ಜನರಿಗೆ ಸೋಂಕು ದೃಢವಾಗಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಕ ಕೆ.ಎನ್.ರಾಜಣ್ಣ ಅವರಿಗೂ ಸೋಂಕು ದೃಢವಾಗಿದ್ದು ನಿವಾಸದಲ್ಲಿ ಏಕಾಂಗಿಯಾಗಿದ್ದು ಚಿಕಿತ್ಸೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net