ಕರೊನಾ ಪರಿಹಾರಕ್ಕೆ ಅಲೆದಾಟ ;ಸೋಂಕಿನಿಂದ ಮೃತಪಟ್ಟ 150 ಮಂದಿಯಲ್ಲಿ 90 ಜನರ ಕುಟುಂಬಕ್ಕಷ್ಟೇ ಪರಿಹಾರ

22 pvg 01
Published on

ಪಾವಗಡ : ಕರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರಧನ ಪಡೆಯಲು ಸಂತ್ರಸ್ತ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆ ಹಾಗೂ ತಹಸೀಲ್ದಾರ್ ಕಚೇರಿಗೆ ನಿತ್ಯ ಅಲೆಯುವಂತಾಗಿದೆ.

ತಾಲೂಕಿನಲ್ಲಿ 2020-21ರಲ್ಲಿ ಸೋಂಕಿಗೆ 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 90 ಮಂದಿ ಮೃತಪಟ್ಟರೆ, ಕೆಲವರು ತುಮಕೂರು, ಬೆಂಗಳೂರು ಆಸ್ಪತ್ರೆಗಳಲ್ಲಿ ಅಸುನೀಗಿದ್ದಾರೆ. ಬಹುತೇಕ ರೋಗಿಗಳು ಮನೆಗೆ ಆಧಾರಸ್ತಂಭವಾಗಿದ್ದು, ಯಜಮಾನನನ್ನು ಕಳೆದುಕೊಂಡ ಕುಟುಂಬಗಳ ಬೀದಿಗೆ ಬಂದಿದೆ. ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರಧನ ಪಡೆಯಲು ಹಲವು ಬಾರಿ ಸರ್ಕಾರಿ ಆಸ್ಪತ್ರೆ ಮತ್ತು ತಹಸೀಲ್ದಾರ್ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮೃತರ ಕುಟುಂಬಸ್ಥರು.

90 ಮಂದಿಗೆ ಪರಿಹಾರ: 150 ಮಂದಿ ಮರಣ ಹೊಂದಿದ್ದು, 90 ಮಂದಿಯ ಹೆಸರನ್ನು ಮಾತ್ರ ಜಿಲ್ಲಾಸ್ಪತ್ರೆಯಿಂದ ತಹಸೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಪಾವಗಡ ತಾಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದರೆ ತಹಸೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ ಎನ್ನುತ್ತಾರೆ. ತಹಸೀಲ್ದಾರ್ ಕಚೇರಿಯಲ್ಲಿ ಕೇಳಿದರೆ ಜಿಲ್ಲಾಸ್ಪತ್ರೆಯಲ್ಲಿ ಡಾಟಾ ಎಂಟ್ರಿಯಾಗಿ ಬರಬೇಕು ಎನ್ನುತ್ತಿದ್ದು, ಶೀಘ್ರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ತಾಲೂಕಿನ ಕರೊನಾ ಸಂತ್ರಸ್ತರ ಒತ್ತಾಯವಾಗಿದೆ.

ಜಿಲ್ಲಾಸ್ಪತ್ರೆಯಿಂದ ಡಾಟಾ ಎಂಟ್ರಿ ಆಗಿ ಬಂದಂತಹ 90 ಹೆಸರುಗಳ ದಾಖಲಾತಿಗಳನ್ನು ಪಡೆಯಲಾಗಿದ್ದು, ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದ 1 ಲಕ್ಷ, ಕೇಂದ್ರ ಸರ್ಕಾರದ 50 ಸಾವಿರ ರೂಪಾಯಿ, ಬಿಪಿಎಲ್ ಹೊರತುಪಡಿಸಿ ಎಪಿಎಲ್ ಇದ್ದರೆ 50 ಸಾವಿರ ರೂಪಾಯಿ ಪರಿಹಾರವನ್ನು ಸಂಬಂಧಿಕರ ಖಾತೆಗೆ ನೇರವಾಗಿ ಸರ್ಕಾರದಿಂದ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲಾಗುತ್ತಿದೆ. ಎನ್.ಮೂರ್ತಿ, ಶಿರಸ್ತೇದಾರ್ ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 90 ಮಂದಿ ಮತ್ತು ಉಳಿದ ಕಡೆ ಮರಣ ಹೊಂದಿದವರ ವಿವರಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾಸ್ಪತ್ರೆಯಿಂದ ಡಾಟಾ ಎಂಟ್ರಿಯಾಗಿ ತಹಸೀಲ್ದಾರ್ ಕಚೇರಿಗೆ ಮಾಹಿತಿ ನೀಡಲಾಗುತ್ತಿದೆ. ಡಾ.ತಿರುಪತಯ್ಯ, ತಾಲೂಕು ವೈದ್ಯಾಧಿಕಾರಿ ಪಾವಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net