ಕರೊನಾ ಲಸಿಕಾಕರಣ ಪೂರ್ಣಗೊಳಿಸಿ ; ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ

20TMK_Dc_meeting
Published on

ತುಮಕೂರು : ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಲಸಿಕೆಗಳನ್ನು ಅರ್ಹರಿಗೆ ನೀಡುವಲ್ಲಿ ಯಾವುದೇ ಬೇಜವಾಬ್ದಾರಿ ತೋರದೆ ಶೀಘ್ರ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 33 ಸಕ್ರಿಯ ಕರೊನಾ ಪ್ರಕರಣಗಳಿದ್ದು, ಈ ಪೈಕಿ 25 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದು, 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಆಸ್ಪತ್ರೆಗೆ ದಾಖಲಾಗುವವರಿಗೆ ಕಡ್ಡಾಯವಾಗಿ ಕನಿಷ್ಠ 1 ಅಥವಾ 2 ಡೋಸ್ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ನೀಡುವ ಮೂಲಕ ಶೇ.100 ಲಸಿಕಾಕರಣ ಪೂರ್ಣಗೊಳಿಸಬೇಕು ಎಂದರು.

ಇತ್ತೀಚೆಗೆ ಕರೊನಾದಿಂದ ಮೃತಪಟ್ಟ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬ ಸಮಾಧಾನವಿದೆಯಾದರೂ ಭವಿಷ್ಯಯದಲ್ಲಿ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳಲು ಲಸಿಕಾಕರಣ ವಿಳಂಬವಾದಲ್ಲಿ ಆಯಾ ತಾಲೂಕಿನ ಸಂಬಂಧಿತ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದರು.

ಬೆಳೆ ಹಾನಿ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಪರಿಹಾರ ಪೋರ್ಟಲ್‌ನಲ್ಲಿ ದಾಖಲಾಗದ ಪ್ರಕರಣ ದಾಖಲಿಸಬೇಕು, ಬಾಕಿ ಇರುವ ಪ್ರಕ್ರಿಯೆ ಆದಷ್ಟು ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ನಕಲಿ ದಾಖಲಾತಿಗೆ ಅವಕಾಶ ಮಾಡಿಕೊಡದೆ ನೈಜ ಫಲಾನುಭವಿಗಳಿಗೆ ಪರಿಹಾರ ದೊರೆಯುವಂತೆ ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಭೂಮಿ ಪೆಂಡೆನ್ಸಿ, ಕೋರ್ಟ್ ಪ್ರಕರಣಗಳು, ಪೈಕಿ ಪಹಣಿ ಒಗ್ಗೂಡಿಸುವಿಕೆ, ಪಹಣಿ ಕಲಂ 3/9 ಮಿಸ್ ಮ್ಯಾಚ್, ಕಂದಾಯ ಗ್ರಾಮಗಳ ರಚನೆ ಹಾಗೂ ಪರಿಶೀಲನೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳನ್ನು ವಿನಾ ಕಾರಣ ಮುಂದೂಡದೆ ನಿರ್ಧಿಷ್ಟ ಸಮಯ ಹಾಗೂ ನಿರ್ದಿಷ್ಟ ಗುರಿಗಳೊಂದಿಗೆ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿಗಳಾದ ವಿ.ಅಜಯ್, ಸೋಮಪ್ಪ ಕಡಕೋಳ, ಡಿಎಚ್‌ಒ ಡಾ.ನಾಗೇಂದ್ರಪ್ಪ ಹಾಗೂ ಆಯಾ ತಾಲೂಕು ತಹಸೀಲ್ದಾರ್‌ಗಳು ಇದ್ದರು.

ಪವಿತ್ರ ವನ ಪರಿಕಲ್ಪನೆ ; ನರೇಗಾ ಯೋಜನೆಯಡಿ ಸರ್ಕಾರದಿಂದ ಅನುಮೋದನೆಗೊಂಡಿರುವ ಪವಿತ್ರ ವನ ಯೋಜನೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನಗೊಳಿಸುವ ಬಗ್ಗೆ ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಚರ್ಚಿಸಿದರು. ಪವಿತ್ರ ವನ ಉದ್ಯಾನವನದ ಪರಿಕಲ್ಪನೆಯಲ್ಲಿ ನಿರ್ಮಿಸಲಾಗುವುದು. ಇದರಲ್ಲಿ ಔಷಧೀಯ ಸಸಿಗಳು, ರಾಶಿ ವನ, ನಕ್ಷತ್ರವನ ಸೇರಿದಂತೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net