2000ಕ್ಕೂ ಹೆಚ್ಚು ಮಂದಿಗೆ ಕರೊನಾ ಲಸಿಕೆ ; ಗ್ರಾಮಾಂತರ ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ಬೃಹತ್ ಅಭಿಯಾನ ಸಕ್ರಿಯ ಆಸ್ಪತ್ರೆ ಸಹಯೋಗ

01Tmk_Corona_lasike_Gowrishankar_01
Published on

ತುಮಕೂರು ; ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಕರೊನಾ ಲಸಿಕಾ ಅಭಿಯಾನ ಆಯೋಜಿಸಲಾಗಿತ್ತು. ಬೆಂಗಳೂರಿನ ಸಕ್ರಿಯ ಆಸ್ಪತ್ರೆಯ ಸಹಯೋಗದೊಂದಿಗೆ ಬಳ್ಳಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಮೆಗಾ ಲಸಿಕಾ ಅಭಿಯಾನಕ್ಕೆ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಿದರು.

2000ಕ್ಕೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಯಿತು.ಎಲ್ಲೆಡೆ ಲಸಿಕೆಯ ಆಭಾವ ಕಂಡುಬರುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಿಲ್ಲ. ಜನರಲ್ಲಿ ಲಸಿಕೆ ಇಲ್ಲದೆ ಮೂರನೇ ಅಲೆಯನ್ನು ಎದುರಿಸುವುದು ಹೇಗೆ ಎಂಬ ಭೀತಿ ಉಂಟಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಬೃಹತ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

ದೇಶದಲ್ಲಿ ಕರೊನಾ ಪ್ರಾರಂಭವಾದಾಗಿನಿಂದಲೂ ನಾನು ಸೇರಿ ನಮ್ಮೆಲ್ಲಾ ಕಾರ್ಯಕರ್ತರು ಜೀವದ ಹಂಗು ತೊರೆದು ಕ್ಷೇತ್ರದ ಜನತೆಯ ಆರೋಗ್ಯ ಕಾಪಾಡಲು ಮುಂದಾಗಿದ್ದೇವೆ. 3ನೇ ಅಲೆ ಭೀತಿ ಎದುರಿಸಲು ನಮ್ಮ ಮನೆಯ ಆವರಣದಲ್ಲಿ 30 ಐಸಿಯು ಬೆಡ್, 50 ಆಕ್ಸಿಜನ್ ಬೆಡ್‌ಗಳನ್ನು ಒಳಗೊಂಡ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿದೆ. ಕ್ಷೇತ್ರದ ಜನರು ಆತಂಕ ಪಡುವ ಅಗತ್ಯವಿಲ್ಲ. ನನ್ನಂತಹ ನೂರಾರು ಶಾಸಕರನ್ನು ಹುಟ್ಟು ಹಾಕುವ ಶಕ್ತಿ ಇರುವ ನಿಮ್ಮಗಳಲ್ಲಿ ಒಬ್ಬರನ್ನು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ ಎಂದು ಭಾವುಕರಾದರು.

25 ಸಾವಿರ ಸಹಾಯಧನ: ಕ್ಷೇತ್ರದ ಜನರ ಆರೋಗ್ಯವಲ್ಲದೆ ಅವರ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಯಾವುದೇ ಮಗು 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದರೆ ಆ ಮಗುವಿಗೆ 25 ಸಾವಿರ ರೂ., ಸಹಾಯಧನ ನೀಡುವ ಕೆಲಸ ಮಾಡಲಾಗುತ್ತಿದೆ. ಕರೊನಾನಿಂದ ತತ್ತರಿಸಿರುವ ಜನರು ತಮ್ಮ ಮಕ್ಕಳ ಶಾಲೆಗಳ ಶುಲ್ಕ ಕಟ್ಟಲಾಗದಿದ್ದರೆ ಅವರ ನೆರವಿಗೆ ನಿಲ್ಲುವುದು ನನ್ನ ಜವಾಬ್ದಾರಿ ಎಂದು ಗೌರಿಶಂಕರ್ ಭರವಸೆಯಿತ್ತರು.

ಮುಂಬರುವ ಜಿಪಂ, ತಾಪ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ. ಜೀವದ ಹಂಗು ತೊರೆದು ನಾನು ಮತ್ತು ನಮ್ಮ ಕಾರ್ಯಕರ್ತರು ಜನರ ಸೇವೆ ಮಾಡಿದ್ದೇವೆ. ಕ್ಷೇತ್ರದ ಜನರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಲಿದ್ದಾರೆ ಎಂಬ ಭರವಸೆ ಇದೆ. ಇದಕ್ಕೆ ಪಕ್ಷದ ಮುಖಂಡರು ಸಾಥ್ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಹರಳೂರು ಸುರೇಶ್, ಪಾಲನೇತ್ರಯ್ಯ, ನರುಗನಹಳ್ಳಿ ವಿಜಯಕುಮಾರ್, ಭೈರೇಗೌಡ, ಬೆಳ್ಳಿಲೋಕೇಶ್, ಸಿರಾಕ್ ರವೀಶ್, ಡಾ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಲಸಿಕೆಗಾಗಿ ಬೆಳ್ಳಂಬೆಳಗ್ಗೆ ಹಾಜರ್: ಲಸಿಕೆ ನೀಡುವ ಬಗ್ಗೆ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಶಾಸಕರ ನಿವಾಸ ಮುಂದೆ ಜನರ ದಂಡೇ ಸೇರಿತ್ತು. ಬೆಳಗ್ಗೆ 6ಕ್ಕೆ ಮನೆಮುಂದೆ ಲಸಿಕೆ ಪಡೆಯಲು ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಹಾಗಾಗಿ, ಲಸಿಕೆ ಪಡೆಯಲು ಬಂದವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಲಸಿಕೆ ಪಡೆಯಲು ಬಂದವರಿಗೆ ಯಾವುದೇ ಅನನುಕೂಲವಾಗದಂತೆ ಗೌರಿಶಂಕರ್ ನೇತೃತ್ವದ ಜೆಡಿಎಸ್ ಕಾರ್ಯಕರ್ತರ ಸ್ವಯಂಸೇವಕರ ತಂಡ ಕ್ರಮವಹಿಸಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 3ರವರೆಗೆ ನಿರಂತರವಾಗಿ ನೂರಾರು ನುರಿತ ವೈದ್ಯಕೀಯ ಸಿಬ್ಬಂದಿ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿತ್ತು.

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಎರಡು ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಸ್ವರ್ಗ ಧರೆಗೆ ಇಳಿಯುತ್ತದೆ ಎಂಬ ಹೇಳಿಕೆಕೊಡುತ್ತಿದ್ದ ಬಿಜೆಪಿ ನಾಯಕರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿಯಲ್ಲಿ ಕುರ್ಚಿ ಮೇಲಾಟ ನಡೆದಿರುವುದು ದುರದೃಷ್ಟಕರ. ಜನ ಎಲ್ಲವನ್ನು ನೋಡುತ್ತಿದ್ದಾರೆ ಕೆಲವೇ ವರ್ಷಗಳಲ್ಲಿ ರಾಜ್ಯವನ್ನು ಬಿಜೆಪಿ ಮುಕ್ತ ಮಾಡಲಿದ್ದಾರೆ. ಡಿ.ಸಿ.ಗೌರಿಶಂಕ್ ಗ್ರಾಮಾಂತರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net