

ಮಧುಗಿರಿ: ತಾಲೂಕಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಶುಭ ಸಂಕೇತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ಕರೊನಾ ಸೋಂಕು ತಡೆಗಟ್ಟುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಶೇ.9ರಷ್ಟಿದ್ದು, ಶೇ.5ಕ್ಕೆ ಇಳಿಕೆಯಾದಲ್ಲಿ ಸೋಂಕು ಇಳಿಕೆಯಾಗಿದೆ ಎಂದು ಭಾವಿಸಲಾಗುತ್ತದೆ. ಅಲ್ಲಿಯವರೆಗೂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ತಾಲೂಕಿನ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಇನ್ನೂ ಸೋಂಕಿತರು ಇದ್ದರೆ ಅವರೆಲ್ಲರನ್ನೂ ಮತ್ತೆ ಪರೀಕ್ಷಿಸಿ ಅಕ್ಕ ಪಕ್ಕದ ಮನೆಯವರನ್ನು ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಪ್ರತೀ ದಿನ ಕನಿಷ್ಠ 600 ಪರೀಕ್ಷೆಗಳನ್ನು ನಡೆಸಬೇಕು. ಮಧುಗಿರಿಯಂತೆ
ಜಿಲ್ಲೆಯಲ್ಲೂ ಸೋಂಕಿತರ ಪ್ರಮಾಣ ಕಡಿಮೆಯಾದರೆ ತಾಲೂಕಿನ ಶಾಸಕರೊಂದಿಗೆ ಸಭೆ ನಡೆಸಿ ಲಾಕ್‌ಡೌನ್ ಸಡಿಲಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿರುವ ಸಾರ್ವಜನಿಕ ಅಸ್ಪತ್ರೆಗೆ 500 ಲೀಟರ್ ಸಾಮರ್ಥ್ಯದ ಆಮ್ಲಜನಕ ಟಕ ಮಂಜೂರು ಮಾಡಲಾಗಿದೆ. ಕರೊನಾ 3ನೇ ಅಲೆ ಬರುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಪಿ.ಎಚ್.ಸಿ ಕೇಂದ್ರಗಳಲ್ಲೂ ಆಮ್ಲಜನಕದ ಪೈಪ್‌ಲೈನ್ ಅಳವಡಿಸಿ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಹೊಸದಾಗಿ ಬಂದಿರುವ ಸಂಚಾರಿ ಲ್ಯಾಬ್ ಮುಂದಿನ ದಿನಗಳಲ್ಲಿ ಮಧುಗಿರಿಗೆ ಆಗಮಿಸಲಿದ್ದು, ರೋಗದ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಿಸಿ ಕೂಡಲೇ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಧುಗಿರಿ-ಶಿರಾ ರಾಷ್ಟ್ರೀಯ ಹೆದ್ದಾರಿ 234 ಅನ್ನು ಅಭಿವೃದ್ಧಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹಣ ಮಂಜೂರು ಮಾಡಿರುವುದಾಗಿ ತಿಳಿಸಿದರು.
ಶಾಸಕ ಎಂ.ವಿ ವೀರಭದ್ರಯ್ಯ ಮಾತನಾಡಿ, ಮಧುಗಿರಿ ತಾಲೂಕಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಕಳೆದ ಬಾರಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸಿದ್ದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗಲ್ಲಿ. ಈ ವರ್ಷವೂ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಡಿಎಚ್‌ಒ ಡಾ.ನಾಗೇಂದ್ರಪ್ಪ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಸೀಲ್ದಾರ್ ವೈ.ರವಿ, ತಾಪಂ ಇಒ ದೊಡ್ಡಸಿದ್ದಯ್ಯ, ಟಿಎಚ್‌ಒ ಡಾ.ರಮೇಶ್ ಬಾಬು, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗಂಗಾಧರ್, ಸಿಪಿಐ ಎಂ.ಎಸ್.ಸರ್ದಾರ್, ಮುಖ್ಯಾಧಿಕಾರಿ ಅಮರನಾರಾಯಣ್, ಸಿ.ಡಿ.ಪಿ.ಒ.ಅನಿತಾ, ಆರೋಗ್ಯ ಇಲಾಖೆ ಶಿರಸ್ಥೆದಾರ್ ಗಣೇಶ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಿಗೆ ಸಿಟಿ ಸ್ಕಾೃನ್ ಯಂತ್ರಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ದಾನಿಗಳು ಮುಂದೆ ಬಂದು ಯಂತ್ರಗಳನ್ನು ನೀಡಿದರೆ ಮಧುಗಿರಿ ಆಸ್ಪತ್ರೆಗೂ ಕೂಡ ಸಿ.ಟಿ.ಸ್ಕಾೃನ್ ಯಂತ್ರ ಅಳವಡಿಸಲಾಗುವುದು. ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ