ಸೋಂಕಿತರಿಗೆ ಚಿಕಿತ್ಸೆ ಮರೀಚಿಕೆ ; ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಕರೊನಾ ; ಒಂದೇ ದಿನ 19 ಮಂದಿ ಸಾವು

19Tmk_Oxygen_Concentrator
Published on

ತುಮಕೂರು : ತಾಲೂಕಿನಲ್ಲಿ ಕರೊನಾ ಸ್ವಲ್ಪ ಹತೋಟಿಗೆ ಬಂದಿರುವ ಲಕ್ಷಣಗಳ ನಡುವೆಯೇ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಸೋಂಕು ಸುಮ್ಮನಾಗುವ ಸಾಧ್ಯತೆ ಇಲ್ಲ ಎನ್ನಿಸಿದೆ.

ಬುಧವಾರ 1798 ಜನರಿಗೆ ಸೋಂಕು ದೃಢವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 1621 ಜನರು ಮನೆಗಳಿಗೆ ವಾಪಸಾದರು. ಕರೊನಾ 19 ಜನರನ್ನು ಬಲಿ ತಗೆದುಕೊಂಡಿದ್ದು, ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ. ತುರ್ತು ನಿಗಾ ಘಟಕದಲ್ಲಿ 132 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರ ಪೈಕಿ 1049 ಪುರುಷರು, 752 ಮಹಿಳೆಯರಿದ್ದಾರೆ. ಐದು ವರ್ಷದೊಳಗಿನ 25 ಮಕ್ಕಳು, 60 ವರ್ಷದ ಮೇಲ್ಪಟ್ಟ 289 ಹಿರಿಯರಿಗೆ ಕರೊನಾ ದೃಢವಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡುವುದು ಸವಾಲಾಗಿದೆ. ಸೋಂಕಿತರಿಗೆ ಆಕ್ಸಿಜನ್ ಬೆಡ್, ಐಸಿಯು ಬೆಡ್‌ಗಳ ಕೊರತೆ ಮುಂದುವರಿದಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆಯೂ ಮರೀಚಿಕೆಯಾಗಿದೆ.

ಪಾವಗಡದ ಟಿ.ಎನ್.ಪೇಟೆಯ 60 ವರ್ಷದ ವೃದ್ಧ, ಕಣಿವೇಲನಹಳ್ಳಿಯ 73 ವರ್ಷದ ವೃದ್ಧ, ಬೆಳ್ಳಿಬಟ್ಲು ಗ್ರಾಮದ 31 ವರ್ಷದ ಯುವಕ, ಮಧುಗಿರಿ ತಾಲೂಕು ಛತ್ರಪಾಳ್ಯದ 60 ವರ್ಷದ ವೃದ್ಧ, ರಂಗಸಮುದ್ರದ 54 ವರ್ಷದ ವ್ಯಕ್ತಿ, ಬಡಿಗೊಂಡನಹಳ್ಳಿಯ 54 ವರ್ಷದ ವ್ಯಕ್ತಿ, ಬ್ಯಾಲ್ಯದ 31 ವರ್ಷದ ಯುವಕ, ಗುಬ್ಬಿ ತಾಲೂಕಿನ ತಿಮ್ಮಪ್ಪನಹಟ್ಟಿಯ 42 ವರ್ಷದ ಮಹಿಳೆ, ಚೇಳೂರಿನ 50 ವರ್ಷದ ಮಹಿಳೆಯನ್ನು ಕರೊನಾ ಬಲಿ ತೆಗೆದುಕೊಂಡಿದೆ.

ಕೊರಟಗೆರೆ ತಾಲೂಕು ಹೊಸಹಳ್ಳಿಯ 62 ವರ್ಷದ ವೃದ್ಧ, ಎಚ್.ಎಚ್.ಪಾಳ್ಯದ 65 ವರ್ಷದ ವೃದ್ಧ, ಕಾರ್ಪೇನಹಳ್ಳಿಯ 85 ವರ್ಷದ ವೃದ್ಧ, ಓಬಳಾಪುರದ 23 ವರ್ಷದ ಯುವತಿ, ಕತ್ತಿನಾಗೇನಹಳ್ಳಿಯ 80 ವರ್ಷ ವೃದ್ಧೆ, ಮಧುಗಿರಿ ತಾಲೂಕು ಕಂಬದಹಳ್ಳಿಯ 60 ವರ್ಷದ ವೃದ್ಧ ಹಾಗೂ ತುಮಕೂರು ಹನುಮಂತಪುರದ 45 ವರ್ಷದ ಹೆಣ್ಣು, ಉಪ್ಪಾರಹಳ್ಳಿಯ 44 ವರ್ಷದ ಪುರುಷ, ಮೆಳೇಕೋಟೆಯ 50 ವರ್ಷದ ವ್ಯಕ್ತಿ, ಹೊನ್ನುಡಿಕೆಯ 62 ವರ್ಷದ ವ್ಯಕ್ತಿ, ಮಧುಗಿರಿ ತಾಲೂಕು ಕಂಬದಹಳ್ಳಿಯ 60 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.

30 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಕೊಡುಗೆ ;  ಕರೊನಾ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದ ಲಕ್ಷಾಂತರ ಜನರು ಪರಿತಪಿಸುತ್ತಿರುವುದನ್ನು ಮನಗೊಂಡು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಯೂ ಆದ ಕಾಪ್‌ರಾಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ.ಚಂದ್ರಶೇಖರ್ ಅವರು 20 ಲಕ್ಷ ರೂ., ಬೆಲೆ ಬಾಳುವ 30 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮೂಲಕ ಹಸ್ತಾಂತರಿಸಿದರು.

ಶ್ರೀ ರೇಣುಕಾ ವಿದ್ಯಾಪೀಠ ಹಾಗೂ ಬೆಳಗುಂಬದ ರೆಡ್‌ಕ್ರಾಸ್‌ನ ಶಾಲೆಗಳಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ಕೋವಿಡ್ ರೋಗಿಗಳ ಚೇತರಿಕೆಗಾಗಿ ಮಂಗಳವಾರ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ದೇಣಿಗೆ ರೂಪದಲ್ಲಿ ನೀಡಲಾಯಿತು.

ಶ್ರೀರೇಣುಕಾ ವಿದ್ಯಾಪೀಠದ ಕೇಂದ್ರದ ಪರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಪರವಾಗಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಉಪಸಭಾಪತಿ ಟಿ.ಬಿ.ಶೇಖರ್ 15 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಸ್ವೀಕರಿಸಿದರು. ರೆಡ್‌ಕ್ರಾಸ್‌ನ ಸಾಗರನಹಳ್ಳಿ ಪ್ರಭು, ಎಡಿಸಿ ಕೆ.ಚನ್ನಬಸಪ್ಪ, ಎಸಿ ವಿ.ಅಜಯ್, ಚಂದ್ರಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net