2658 ಜನರಿಗೆ ಸೋಂಕು ದೃಢ ; 18 ಜನರನ್ನು ಬಲಿ ಪಡೆದ ಕರೊನಾ

12ynh-03
Published on

ತುಮಕೂರು: ಜನತಾಕರ್ಯ್ೂ ನಡುವೆಯೂ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಬುಧವಾರ 2658 ಜನರಿಗೆ ಸೋಂಕು ದೃಢವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18148ಕ್ಕೇರಿದೆ.

ಇದೇ ಸಮಯಕ್ಕೆ 2673 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು ಈವರೆಗೆ ಜಿಲ್ಲೆಯಲ್ಲಿ 50549 ಜನರು ಕರೊನಾ ವಿರುದ್ಧ ಗೆದ್ದಿದ್ದಾರೆ. ಆದರೆ, ಬುಧವಾರ ಕೂಡ 18 ಜನರು ಮೃತರಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ, ಗ್ರಾಮೀಣ ಭಾಗದಲ್ಲಿಯೂ ಸಾವಿನ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಲೇ ಇದೆ.

ಜನರು ರಸ್ತೆಗಳಿಯದೇ ಮನೆಯಲ್ಲಿಯೇ ಉಳಿದಿದ್ದರೂ ತುಮಕೂರು ನಗರದಲ್ಲಿಯೇ 719 ಜನರಿಗೆ ಸೋಂಕು ದೃಢವಾಗಿದ್ದು ಪ್ರಸ್ತುತ 6365 ಸಕ್ರಿಯ ಪ್ರಕರಣಗಳಿವೆ, ಮಧುಗಿರಿಯಲ್ಲಿಯೂ 322 ಜನರಿಗೆ ಸೋಂಕು ದೃಢವಾಗಿರುವುದು ಆತಂಕ ಹೆಚ್ಚಿಸಿದೆ. ತುರುವೇಕೆರೆ ಹೊರತುಪಡಿಸಿದರೆ ಬುತೇಕ ಎಲ್ಲ್ಲ ತಾಲೂಕಿನಲ್ಲಿಯೂ ಬುಧವಾರ ಸೋಂಕಿತರ ಸಂಖ್ಯೆ ಜಾಸ್ತಿಯೇ ಇದೆ.

1495 ಪುರುಷರು, 1163 ಮಹಿಳೆಯರಿಗೆ ಸೋಂಕು ತಗುಲಿದ್ದು ಈ ಪೈಕಿ ಐದು ವರ್ಷದೊಳಗಿನ 29 ಮಕ್ಕಳು, 60 ವರ್ಷ ಮೇಲ್ಪಟ್ಟ 359 ಹಿರಿಯರಿಗೂ ಸೋಂಕು ತಗುಲಿದೆ. ಎಲ್ಲರಿಗೂ ಚಿಕಿತ್ಸೆ ಲಭಿಸುವುದು ದೊಡ್ಡ ಸಮಸ್ಯೆಯಾಗಿದ್ದು ಬಹುತೇಕರು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಒಬ್ಬರಿಗೆ ಸೋಂಕು ದೃಢವಾದರೆ ಉಳಿದೆಲ್ಲ ಸದಸ್ಯರಿಗೂ ಸೋಂಕು ಬರುತ್ತಿರುವುದು ಸಂಖ್ಯೆಯನ್ನು ಹೆಚ್ಚಿಸಿದೆ ಜತೆಗೆ ಮನೆಯಲ್ಲಿಯೇ ಇರುವ ಮಕ್ಕಳು ಹಾಗೂ ವೃದ್ಧರಿಗೂ ಸೋಂಕು ವಕ್ಕರಿಸುತ್ತಿದೆ. ಈ ಬಗ್ಗೆ ಜಾಗೃತರಾಗಿ ಮತ್ತಷ್ಟು ದಿನ ಮನೆಯಲ್ಲಿಯೂ ದೈಹಿಕ ಅಂತರ ಕಾಯ್ದಕೊಳ್ಳುವ ತುರ್ತು ಇದೆ.

ಜಿಲ್ಲಾಡಳಿತದ ಲೆಕ್ಕದಲ್ಲಿ 18 ಸಾವು!: ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿಯೇ ಬುಧವಾರ ಬರೋಬ್ಬರಿ 18 ಜನರು ಕರೊನಾಗೆ ಬಲಿಯಾಗಿದ್ದಾರೆ, ಜಿಲ್ಲಾಡಳಿತದ ಗಮನಕ್ಕೆ ಬರದೆಯೂ ಇನ್ನೂ ಸಾಕಷ್ಟು ಜನರು ಸಾವನ್ನಪ್ಪಿರುವ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವಾಗತೊಡಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸಾವಿನ ಸುದ್ದಿ ಕೇಳಿಸುತ್ತಿದೆ. ತುಮಕೂರು ತಾಲೂಕು ಹೊಳಕಲ್ಲಿನ 60 ವರ್ಷದ ವೃದ್ಧ,

ಕೊರಟಗೆರೆ ತಾಲೂಕು ಬುರುಗನಹಳ್ಳಿಯ 60 ವರ್ಷದ ವೃದ್ಧ, ವಜ್ಜನಕುರಿಕೆಯ 70 ವರ್ಷದ ವೃದ್ಧೆ, ಪಟ್ಟಣದ 55 ವರ್ಷದ ಮಹಿಳೆ, ಮಧುಗಿರಿ ತಾಲೂಕು ಬಡವನಹಳ್ಳಿಯ 70 ವರ್ಷದ ವೃದ್ಧೆ, ಲಿಂಗೇನಹಳ್ಳಿಯ 65 ವರ್ಷದ ವೃದ್ಧೆ, ಗುಬ್ಬಿ ತಾಲೂಕು ಬೋಗಸಂದ್ರದ 59 ವರ್ಷದ ಮಹಿಳೆ, ಪಟ್ಟಣದ 35 ವರ್ಷದ ಯುವಕ, ತುರುವೇಕೆರೆ ತಾಲೂಕು ಬೆನಕನಕೆರೆಯ 75 ವರ್ಷದ ವೃದ್ಧ, ಸೋಮೇನಹಳ್ಳಿಯ 65 ವರ್ಷದ ವೃದ್ಧೆಯನ್ನು ಕರೊನಾ ಬಲಿ ತೆಗದುಕೊಂಡಿದೆ.

ಪಾವಗಡ ತಾಲೂಕು ದಾಸರಮ್ಮನಹಳ್ಳಿಯ 65 ವರ್ಷದ ವೃದ್ಧ, ತುಮಕೂರು ಕ್ಯಾತಸಂದ್ರದ 51 ವರ್ಷದ ಮಹಿಳೆ, ವೀರಾಪುರದ 60 ವರ್ಷದ ವೃದ್ಧ, ರಾಜೀವ್‌ಗಾಂಧಿ ನಗರದ 51 ವರ್ಷದ ವ್ಯಕ್ತಿ, ಕಲ್ಲೇನಹಳ್ಳಿಯ 65 ವರ್ಷದ ವೃದ್ಧ, ಬೆಳ್ಳಾವಿಯ 50 ವರ್ಷದ ಪುರುಷ, ಹೆಬ್ಬೂರಿನ 51 ವರ್ಷದ ವ್ಯಕ್ತಿ ಕರೊನಾಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net