ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ; ಪ್ರತಿಷ್ಠಿತ ಆಸ್ಪತ್ರೆಗಳ ಸಿಬ್ಬಂದಿಯೇ ದಂಧೆಯಲ್ಲಿ ಭಾಗಿ ; ಹಣಕ್ಕಾಗಿ ಅಮಾನುಷ ಕೃತ್ಯವೆಸಗಿದ ಮೂವರ ಸೆರೆ

IMG-20210503-WA0014
Published on

ತುಮಕೂರು : ರಾಜ್ಯಾದ್ಯಂತ ಕರೊನಾ ಸೋಂಕಿತರಿಗೆ ನೀಡಲು ಕೊರತೆಯಾಗಿರುವ ರೆಮ್‌ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುವುದು ದೃಢವಾಗಿದೆ.

ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೇ ಈ ದಂಧೆಯಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ತುಮಕೂರಿನಲ್ಲಿ ರೆಮ್‌ಡಿಸಿವಿರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಔಷಧದ ಅಕ್ರಮ ಮಾರಾಟದ ಬಗ್ಗೆ ಅನುಮಾನಗಳು ಬಯಲಾಗಿದೆ, ಮಹಾರಾಷ್ಟ್ರ ಗಡಿಯಲ್ಲಿಯೂ ಜಿಲ್ಲೆಗೆ ಪೂರೈಕೆಯಾಗಿದ್ದ ಔಷಧ ಕಾಳಸಂತೆಯಲ್ಲಿ ಪತ್ತೆಯಾಗಿದ್ದು ಹೆಚ್ಚು ಚರ್ಚೆಗೆ ಒಳಗಾಗಿತ್ತು.

ನಗರದ ಪ್ರಸಿದ್ಧ ಆಸ್ಪತ್ರೆಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗೋಕುಲ ಬಡಾವಣೆಯ ಸೈಯದ್ ಹರ್ಷದ್(23), ಸಿಟಿ ಎಕ್ಸ್ ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೊಳಕಾಲ್ಮೂರಿನ ರಖಿಬ್(30) ಹಾಗೂ ಸೂರ್ಯ ಆಸ್ಪತ್ರೆಯ ಓಟಿ ಟೆಕ್ನಿಷಿಯನ್ ಹೊಂಬಯ್ಯನಪಾಳ್ಯದ ರಂಗನಾಥ(30) ಬಂಧಿತರು.

ಸರ್ಕಾರದಿಂದ ಸೋಂಕಿತರಿಗೆ ನೀಡಿದ ರೆಮ್‌ಡಿಸಿವಿರ್ ಔಷಧವನ್ನು ರೋಗಿಗಳಿಗೆ ನೀಡಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾಳಸಂತೆಯಲ್ಲಿ ಸಾವಿರಾರು ರೂಪಾಯಿ ಪಡೆದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ, ಮೃತ ರೋಗಿಗಳ ಹೆಸರಿನಲ್ಲಿ ಇಂತಹ ಸಾಕಷ್ಟು ದಂಧೆ ನಡೆದಿದ್ದು ಆರೋಗ್ಯ ಇಲಾಖೆ ಔಷಧ ನೀಡಿದ್ದರೂ ರೋಗಿಗಳಿಗೆ ನೀಡದೆ ವಂಚಿಸಿರುವುದು ಬಯಲಾಗಿದೆ.

4 ಸಾವಿರ ಇಂಜಕ್ಷನ್ 17 ಸಾವಿರಕ್ಕೆ ಮಾರಾಟ: ಸಾರ್ವಜನಿಕರಿಂದ ಸಾಕಷ್ಟು ದೂರುಗಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ನಿಗಾವಹಿಸಿದ್ದರು. ನಗರದ ಗುಂಚಿ ಸರ್ಕಲ್‌ನಲ್ಲಿ ಆರೋಪಿಗಳು ಮೆಡಿಸಿನ್ ಮಾರುವಾಗ ಮೂವರನ್ನೂ ಬಂಧಿಸಲಾಗಿದ್ದು, ರೆಮ್‌ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ, 4700 ರೂ. ಮಾರುಕಟ್ಟೆ ಬೆಲೆಯ ಔಷಧವನ್ನು ಕಾಳಸಂತೆಯಲ್ಲಿ 17 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಬಡವರಿಗೆ ಸರ್ಕಾರದಿಂದ ಉಚಿತವಾಗಿ ಬಂದ ಔಷಧವನ್ನು ಖಾಸಗಿ ಆಸ್ಪತ್ರೆ ಸಿಬ್ಬಂದಿ ವಂಚಿಸಿ ಶ್ರೀಮಂತ ಕುಟುಂಬಗಳಿಗೆ ಮಾರಾಟ ಮಾಡುತ್ತಿದ್ದ ಅಮಾನುಷ ಕೃತ್ಯ ಬಯಲಾಗಿದೆ. ಸೈಬರ್ ಘಟಕದ ಸಿಪಿಐ ಎಂ.ವಿ.ಶೇಷಾದ್ರಿ, ನಗರಠಾಣೆ ಪಿಎಸ್‌ಐ ಮಂಜುನಾಥ್, ಡ್ರಗ್ ಕಂಟ್ರೋಲರ್ ಮಮತಾ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿತ್ತು.

ಸಮಗ್ರ ತನಿಖೆಯಾದರೆ ಎಲ್ಲವೂ ಬಯಲು: ತೀವ್ರ ಉಸಿರಾಟದ ಸಮಸ್ಯೆ ಎದುರಿಸುವ ಕರೊನಾ ಸೋಂಕಿತರಿಗೆ ಆರೋಗ್ಯ ಇಲಾಖೆ ವತಿಯಿಂದಲೇ ರೆಮ್‌ಡಿಸಿವಿರ್ ಪೂರೈಸಿದ್ದರೂ ಸೋಂಕಿತರಿಗೆ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ, ರೋಗಿಗಳ ಹೆಸರನ್ನು ನಮೂದಿಸಿ ಬಿಡುಗಡೆಯಾದ ಔಷಧಗಳು ಕೂಡ ರೋಗಿಗೆ ತಲುಪದೆ ಇರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿಕೊಡಿಸಿದ್ದ ಔಷಧಗಳು ರೋಗಿಗೆ ತಲುಪದೆ ಕಾಳಸಂತೆಗೆ ಮಾರಾಟವಾಗಿರುವುದು ಆಶ್ಚರ್ಯ ಮೂಡಿಸಿದೆ. ತೀವ್ರ ಸೋಂಕು ಕಾಣಿಸಿಕೊಂಡ ಒಬ್ಬ ರೋಗಿಗೆ ಕನಿಷ್ಠ ಐದು ಡೋಸ್ ನೀಡಲಾಗುತ್ತಿದ್ದು, ಒಂದೆರಡು ಕೊಟ್ಟು ಉಳಿದವನ್ನೂ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ.

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಔಷಧ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದರೆ ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆ, ನಿಯಂತ್ರಣ ಕೊಠಡಿ ಮೊ.9480802909 ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿ, ಈ ವಂಚನೆಗೆ ಕಡಿವಾಣ ಹಾಕಲು ಸಹಕಾರ ನೀಡಬೇಕು. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net