ಸಭೆ, ಸಮಾರಂಭ ನಡೆಯದಂತೆ ನಿಗಾವಹಿಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

DSC_8896
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸ್ಫೋಟವಾಗಿದ್ದು, ಎಲ್ಲೆಡೆಯೂ ಮುನ್ನೆಚ್ಚರಿಕೆಯಾಗಿ ಜಾತ್ರೆ, ನಾಟಕ ಪ್ರದರ್ಶನ, ಸಭೆ, ಸಮಾರಂಭ ನಡೆಯದಂತೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಉಪವಿಭಾಗಾಧಿಕಾರಿ, ತಹಸೀಲ್ದಾರ್‌ಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಸೂಚನೆಗಳನ್ನು ನೀಡಿದರು.

ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಜಾತ್ರೆ, ಮತ್ತಿತರ ಸಭೆ, ಸಮಾರಂಭಗಳು ನಡೆದರೆ ಆಯಾ ತಾಲೂಕು ತಹಸೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಹಾಗೂ ತಾಪಂ ಇಒ ಅವರನ್ನೇ ಪೂರ್ಣ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ನಿಗದಿತ ಗುರಿಯಂತೆ ತಾಲೂಕುವಾರು ಪ್ರತಿದಿನ ವೈಜ್ಞಾನಿಕವಾಗಿ ಕನಿಷ್ಠ ತಲಾ 500 ಸ್ವಾಬ್ ಸಂಗ್ರಹಣೆ ಮಾಡಬೇಕು, ಸಂಗ್ರಹಿಸಲಾದ ಮಾದರಿಗಳನ್ನು ಪ್ರಥಮ ಮತ್ತು ದ್ವಿತೀಯ ಸಂಪರ್ಕಿತ ಮಾದರಿಗಳೆಂದು ಗುರುತು ಮಾಡಿ ವಿಂಗಡಣೆ ಮಾಡಬೇಕು. ನಂತರ ನಿಯಮಾನುಸಾರ ಲ್ಯಾಬ್‌ಗೆ ರವಾನಿಸಿ 24 ಗಂಟೆಯೊಳಗಾಗಿ ಫಲಿತಾಂಶ ನೀಡಬೇಕು ಎಂದರು.

ಜಿಲ್ಲಾಸ್ಪತ್ರೆ ಮತ್ತು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಸ್ಥಾಪಿಸಿರುವ ಆರ್‌ಟಿಪಿಸಿಆರ್ ಲ್ಯಾಬ್‌ಗೆ ಅಗತ್ಯವಿರುವ ಯಂತ್ರಗಳು, ಸಾಮಗ್ರಿ, ನುರಿತ ಸಿಬ್ಬಂದಿ ಲಭ್ಯವಿರುವಂತೆ ಕ್ರಮ ಕೈಗೊಂಡು ಲೋಪವಾಗದಂತೆ ಕ್ರಮವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕರೊನಾ ದೃಢಪಟ್ಟಿರುವ ವ್ಯಕ್ತಿಯ ಕನಿಷ್ಠ 20 ಪ್ರಥಮ ಮತ್ತು 20 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಬೇಕು. ಗುರುತಿಸಲಾದ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಹಾಗೂ ಸರ್ಕಾರದಿಂದ ಈಗಾಗಲೇ ಗುರುತಿಸಲಾಗಿರುವ ಹೊರ ರಾಜ್ಯ ಪ್ರಯಾಣಿಕರನ್ನು ಹೋಂ ಐಸೋಲೇಷನ್, ಹೋಂ ಕ್ವಾರಂಟೈನ್‌ನಲ್ಲಿರಿಸಿ ಅವರ ದೈನಂದಿನ ಆರೋಗ್ಯದ ಮಾಹಿತಿ ಪಡೆದು ತಂತ್ರಾಂಶದಲ್ಲಿ ನಮೂದಿಸಬೇಕು ಎಂದರು.

ಜಿಲ್ಲಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗಿರುವ ರೋಗಲಕ್ಷಣಗಳಿರುವ ಪ್ರಕರಣಗಳ ಬಗ್ಗೆ ಹಾಗೂ ಔಷಧಾಲಯಗಳಲ್ಲಿ ಕರೊನಾ ರೋಗದ ಲಕ್ಷಣಕ್ಕೆ ಸಂಬಂಧಿಸಿದಂತೆ ಔಷಧ ಪಡೆದವರ ಮಾಹಿತಿ ಸಂಗ್ರಹಿಸಬೇಕು ಎಂದರು.

ಸರ್ಕಾರ ನಿಗದಿಪಡಿಸಿರುವಂತೆ ಪ್ರತಿನಿತ್ಯ ಕನಿಷ್ಠ 20,000 ಜನರಿಗೆ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು. ಪ್ರತಿ ಕೋವಿಡ್ ಲಸಿಕಾ ಕೇಂದ್ರದಲ್ಲಿ 60 ರಿಂದ 100 ಮಂದಿಗೆ ಲಸಿಕೆ ನೀಡುವ ಗುರಿ ಸಾಧಿಸಬೇಕು ಎಂದರಲ್ಲದೆ, ಕರೊನಾ ನಿಯಂತ್ರಣದೊಂದಿಗೆ ಲಸಿಕೀಕರಣ ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್, ಪಾಲಿಕೆ ಆಯುಕ್ತೆ ರೇಣುಕಾ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು, ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನ್‌ದಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net