

ತುಮಕೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಎಲ್ಲ ವಾರ್ಡ್‌ಗಳಲ್ಲಿಯೂ ಕರೊನಾ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಜತೆ ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಿದೆ.
ನಗರದ ಸಿದ್ಧಗಂಗಾ ಬಡಾವಣೆ 9ನೇ ಕ್ರಾಸ್‌ನಲ್ಲಿ ಕಾರ್ಯಾಚರಣೆಗೆ ಮೇಯರ್ ಬಿ.ಕೆ.ಕೃಷ್ಣಪ್ಪ ಮಾತನಾಡಿ, ಕರೊನಾ ಎರಡನೇ ಅಲೆ ನಗರದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ಜನರು ಮಾರ್ಗಸೂಚಿ ಪಾಲಿಸುವುದು ಅನಿವಾರ್ಯವಾಗಿದೆ. ಪಾಲಿಕೆ ವತಿಯಿಂದ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದ್ದು, ಜನರು ಸಹಕಾರ ನೀಡಬೇಕು ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ. ಸೋಂಕಿತರ ಜತೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು ತಾವಾಗಿಯೇ ಮಾಹಿತಿ ನೀಡಬೇಕು. ಅಂತಹವರಿಗೆ ವಾರ್ಡ್‌ನಲ್ಲಿಯೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. 45ವರ್ಷ ಮೇಲ್ಪಟ್ಟ ನಾಗರಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. 28 ದಿನಗಳ ನಂತರ ದ್ವಿತೀಯ ಹಂತದ ಲಸಿಕೆ ಪಡೆಯಬಹುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಇದರ ಉಲ್ಲಂಘನೆ ಮಾಡಿದವರಿಗೆ ಕಾನೂನು ರೀತಿ ಪಾಲಿಕೆ ವ್ಯಾಪ್ತಿಯಲ್ಲಿ 250ರೂ. ದಂಡ ವಿಧಿಸಲಾಗುವುದು. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅನಗತ್ಯ ಸಭೆ, ಸಮಾರಂಭಗಳಿಗೆ ಹೋಗುವುದನ್ನು ತಾತ್ಕಾಲಿಕವಾಗಿ ನಿಯಂತ್ರಿಸಬೇಕು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೇ ಸಭೆ, ಸಮಾರಂಭ ನಡೆದರೆ ಅಂತವರ ವಿರುದ್ಧ ಕಾನೂನು ಕ್ರಮಕೈಗೊಂಡು ಗರಿಷ್ಠ 10 ಸಾವಿರ ರೂ. ದಂಡ ವಿಧಿಸಲು ವಿಶೇಷವಾಗಿ 4 ಮೊಬೈಲ್ ಸ್ಕ್ವಾಡ್ ರಚಿಸಲಾಗಿದೆ. ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಲಿದ್ದಾರೆ ಎಂದರು.
ನಗರ ಆರೋಗ್ಯಾಧಿಕಾರಿ ಡಾ.ಮೋಹನ್ ಮಾತನಾಡಿ, 24ನೇ ವಾರ್ಡ್‌ನಲ್ಲಿ ವಿಧ್ಯುಕ್ತವಾಗಿ ಸ್ವ್ಯಾಬ್ ಕಲೆಕ್ಷನ್ ಪ್ರಕ್ರಿಯೆ ಆರಂಭವಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಪ್ರಾಥಮಿಕ, ಹಾಗೂ ದ್ವೀತಿಯ ಸಂಪರ್ಕದವರ ಸ್ವ್ಯಾಬ್ ಕಲೆಕ್ಷನ್ ಮಾಡಲಾಗುತ್ತಿದೆ. ಜತೆಗೆ ಬಿಪಿ, ಶುಗರ್ ಸೇರಿ ಇನ್ನಿತರ ದೀರ್ಘ ಕಾಯಿಲೆಗಳನ್ನು ಪತ್ತೆ ಮಾಡಲಾಗುತ್ತಿದೆ. ಅಂತಹವರಿಂದಲೂ ಸ್ವ್ಯಾಬ್ ಕಲೆಕ್ಷನ್ ಮಾಡಲಾಗುವುದು. ವಾರ್ಡ್‌ನಲ್ಲಿ 45ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಲು ತೊಂದರೆಯಾಗದಂತೆ ವಾಸವಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲು ಸಿದ್ಧತೆ ಮಾಡಲಾಗಿದೆ ಎಂದರು. ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.
ಪಾಲಿಕೆ ವ್ಯಾಪ್ತಿಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ವಾರ್ಡ್ ಹಂತದಲ್ಲಿ ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಮೊಬೈಲ್ ಆರೋಗ್ಯ ವಾಹನದ ಮೂಲಕ ತಪಾಸಣೆ ಕೈಗೊಳ್ಳಲಾಗಿದೆ. ನಗರದಲ್ಲಿ ಕರೊನಾ ನಿಯಂತ್ರಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ರೇಣುಕಾ, ಪಾಲಿಕೆ ಆಯುಕ್ತೆನಡೆಯಲಿದೆ.