ಕಾರು ಖರೀದಿಸಲು ಹೋಗಿ 2.94 ಲಕ್ಷ ಕಳ್ಕೊಂಡ ಅಮಾಯಕ

New One Hundred Rupee Indian Currency
New One Hundred Rupee Indian Currency
Published on

ಚಿಕ್ಕಬಳ್ಳಾಪುರ: ಆನ್ ಲೈನ್ ಮೂಲಕ ವಂಚನೆಯ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ವಾಹನದ ಚಿತ್ರ ಮತ್ತು ಮಾಹಿತಿಯನ್ನು ನೋಡಿ, ಖರೀದಿಸಲು ಹೋದ ಅಮಾಯಕರೊಬ್ಬರು 2.94 ಲಕ್ಷ ರೂ ಕಳೆದುಕೊಂಡಿದ್ದಾರೆ.

"ಮಾರುತಿ ಸ್ವಿಫ್ಟ್ ಡಿಸೈರ್, 2017 ನೇ ಮಾಡೆಲ್, ಬೆಲೆ ಕೇವಲ 1,45,000 ರೂ. ಬೇಕಾದವರೂ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ". ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ತಕ್ಷಣ ಚೇಳೂರು ತಾಲೂಕಿನ ಮಾಗಿರೆಡ್ಡಿಪಲ್ಲಿಯ ಬಿ.ಜಯಪ್ಪ ಅಪರಿಚಿತ ವ್ಯಕ್ತಿಯೊಂದಿಗೆ ಫೋನ್‌ನಲ್ಲಿಯೇ ವ್ಯವಹಾರ ಕುದುರಿಸಿದ್ದಾರೆ. ಇದಕ್ಕೆ ಕುರಿ ಹಳ್ಳಕ್ಕೆ ಬಿತ್ತು ಎಂದುಕೊಂಡ ವಂಚಕ, ಮೊದಲು ಪ್ರೋಸಿಸೆಂಗ್ ಚಾರ್ಜ್ 31,000 ರೂ, ಜಿಎಸ್‌ಟಿ ಶುಲ್ಕ 32,500 ರೂ ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡಿದ್ದಾನೆ. ಮತ್ತೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಕಟ್ಟಿಸಿಕೊಂಡಿದ್ದಾನೆ. ಕೊನೆಗೆ ವ್ಯವಹಾರ ಸಂಪರ್ಕವನ್ನು ಕಡಿದುಕೊಂಡಿದ್ದಾನೆ. ಇತ್ತ ಕಾರು ಇಲ್ಲ, ಕಟ್ಟಿದ ಹಣವೂ ಸಿಗದಿರುವುದರಿಂದ ವಂಚನೆಗೊಂಡಿರುವುದರ ಅರಿವಾಗುತ್ತಿದ್ದಂತೆ ಜಯಪ್ಪ ಜಿಲ್ಲಾ ಅಪರಾಧ ದಳ ಠಾಣೆಗೆ ದೂರು ನೀಡಿದ್ದಾರೆ.

ಅಧಿಕೃತ ಸಂಸ್ಥೆಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕು. ಅಪರಿಚಿತರನ್ನು ನಂಬಬಾರದು. ಸಮರ್ಪಕವಾಗಿ ದೃಢಿಸಿಕೊಳ್ಳದೇ ಯಾರೋ ಹೇಳಿದಂತೆ ಆನ್ ಲೈನ್‌ನಲ್ಲಿ ಹಣವನ್ನು ಜಮಾ ಮಾಡಬಾರದು. ಲಾಟರಿ, ಮಾರಾಟ ಮತ್ತು ಗಿಫ್ಟ್ ಗಳ ಹೆಸರಿನಲ್ಲಿ ವ್ಯಾಪಕವಾಗಿ ವಂಚಿಸಲಾಗುತ್ತಿದೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಎಷ್ಟೇ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಅಮಾಯಕರು ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net