ಕರೊನಾ 3ನೇ ಅಲೆ ನಿಯಂತ್ರಿಸಲು ಸಜ್ಜು ; ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 5 ಮಕ್ಕಳ ಐಸಿಯು ಬೆಡ್ ; ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮಾಹಿತಿ

25Tmk_Kunchitiga_Corona
Published on

ತುಮಕೂರು : ಕರೊನಾ 3ನೇ ಅಲೆ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 5 ಮಕ್ಕಳ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ರಾಜ್ಯ ಕುಂಚಿಟಿಗರ ಸಂಘದ ಮಹಿಳಾ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಕರೊನಾ ಸೇನಾನಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಉದ್ದಿಮೆದಾರರ ಸಹಕಾರದಿಂದ ಜಿಲ್ಲಾಡಳಿತ 3ನೇ ಅಲೆ ಸೇರಿ ಕರೊನಾ ಸಂಬಂಧಿಸಿದ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧವಾಗಿದೆ ಎಂದರು.

3ನೇ ಅಲೆಯಲ್ಲಿ ಮಕ್ಕಳು ಹೆಚ್ಚು ತೊಂದರೆಗೀಡಾಗಬಹುದೆಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಹಿರಿಯ ತಜ್ಞ ವೈದ್ಯರ ಮೂಲಕ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿಗೆ ಮಕ್ಕಳ ಚಿಕಿತ್ಸೆ ಸಂಬಂಧಿಸಿದಂತೆ ತರಬೇತಿ ಕೊಡಿಸಲಾಗಿದೆ. ಆಮ್ಲಜನಕದ ಕೊರತೆ ಈಗ ನೀಗಿದೆ. 2ನೇ ಅಲೆ ಆರಂಭದಲ್ಲಿ ಸಾಕಷ್ಟು ತೊಂದರೆಯಾದರೂ ನಂತರದಲ್ಲಿ ಸುಧಾರಿಸಿಕೊಂಡು ಎಲ್ಲವನ್ನು ನಿಭಾಯಿಸಿಕೊಂಡು ಮುನ್ನೆಡೆದಿದ್ದೇವೆ. ಇದಕ್ಕೆ ನಮ್ಮ ವೈದ್ಯಕೀಯ ಸಿಬ್ಬಂದಿಯ ನಿಸ್ವಾರ್ಥ ಸೇವೆಯೇ ಕಾರಣ ಎಂದು ಪ್ರಶಂಸಿಸಿದರು.

ಕರೊನಾ ಸಂಕಷ್ಟದಲ್ಲಿ ವೈದ್ಯಕೀಯ ಸಿಬ್ಬಂದಿ ಅದರಲ್ಲಿಯೂ ಶುಶ್ರೂಷಕರು ತಮ್ಮ ಜೀವದ ಹಂಗನ್ನೇ ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿ ಜಿಲ್ಲೆಗೆ ಒಳ್ಳೆಯ ಹೆಸರು ತಂದಿದ್ದಾರೆ. ನಿಜವಾದ ಸನ್ಮಾನ ಅವರಿಗೆ ದೊರೆಯಬೇಕು. ಮುಂದೆಯೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುವಂತಹ ಧೈರ್ಯ ಅವರಿಗೆ ದೊರೆಯಲಿ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ವಿಶ್ವ ಕುಂಚಟಿಗ ಮಹಾಸಂಸ್ಥಾನದ ಮಠದ ಹನುಮಂತನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಕುಂಚಿಟಿಗ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸಿ.ಲಲಿತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ದೊಡ್ಡಲಿಂಗಪ್ಪ, ಕುಂಚಿಟಿಗ ಸಂಘದ ಮಹಿಳಾ ಘಟಕದ ಅಂಬುಜ, ನೇತ್ರಾ, ಕಾತ್ಯಾಯಿನಿ, ಶ್ರೀದೇವಿ,ರಮ್ಯ, ಶಶಿಕಲಾ, ಶಾರದಾ ಇದ್ದರು.

10 ವರ್ಷ ಹಿಂದಕ್ಕೆ ಸರಿದ ದೇಶ : ಕರೊನಾ ಹೊಡೆತದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ದೇಶವು 10 ವರ್ಷ ಹಿಂದಕ್ಕೆ ಸರಿಯಿತು. ಮೊದಲನೇ ಅಲೆಯಲ್ಲಿ ಸಾವು, ನೋವುಗಳು ಸಂಭವಿಸಿದಾಗ ಸೋಂಕಿನ ಭೀತಿಯಿಂದ ಜನತೆ ಮಾನವೀಯತೆ ಮರೆತಂತೆ ವರ್ತಿಸಿದರು. ಆದರೆ, 2ನೇ ಅಲೆ ವೇಳೆಗೆ ಜನರಲ್ಲಿಯೂ ಕೊಂಚ ಜಾಗೃತಿ ಮೂಡಿದ್ದು ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಶವಸಂಸ್ಕಾರ ಸಾಧ್ಯವಾಯಿತು. ಸಂಕಷ್ಟ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯಕೀಯ ಸಿಬ್ಬಂದಿ ಜತೆಗೆ ಗೌರವಯುತವಾಗಿ, ಸಂಯಮದಿಂದ ವರ್ತಿಸುವ ಮೂಲಕ ಅವರ ಆರೋಗ್ಯ ಸೇವೆಯನ್ನು ಸ್ಮರಿಸೋಣ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net