

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಒಂದಿಲ್ಲೊಂದು ವಿಶೇಷಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿಯೇ ಅತೀ ದೊಡ್ಡ ದೇಶೀಯ ಕಾರ್ಗೋ ಟರ್ಮಿನಲ್ ಸ್ಥಾಪಿಸುವ ಮೂಲಕ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.
ಬರೊಬ್ಬರಿ 7 ಎಕರೆ ವಿಶಾಲವಾದ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಾರ್ಗೋ ಟರ್ಮಿನಲ್ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ದೇಶೀಯವಾಗಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಇರಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮತ್ತು ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೆನ್ಜೀಸ್ ಏವಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾಗಿದ್ದು,
ಕೈಗಾರಿಕೆಗಳ ಸಂಪರ್ಕ ಮತ್ತು ಪೂರೈಕೆ ಸರಪಳಿಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಹೊಸ ಕಾರ್ಗೋ ಟರ್ಮಿನಲ್ ಮಹತ್ವದ ಪಾತ್ರ ವಹಿಸಲಿದೆ.
ಅತಿದೊಡ್ಡ, ಸುಧಾರಿತ ಟರ್ಮಿನಲ್: 3.60 ಲಕ್ಷ ಮೆಟ್ರಿಕ್ ಟನ್‌ಗಳ ಗರಿಷ್ಠ ನಿರ್ವಹಣಾ ಸಾಮರ್ಥ್ಯ ಹೊಂದಿದೆ. 42 ಬೃಹತ್ ಟ್ರಕ್‌ಗಳು 400ಕ್ಕೂ ಹೆಚ್ಚು ಕಾರ್ಗೋ ಬೋಗಿಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ.
ಸರಕುಗಳನ್ನು ಪರೀಕ್ಷಿಸುವ ಎಕ್ಸ್-ರೇ ಯಂತ್ರದ ಜತೆ ವಿಮಾನಕ್ಕೆ ಸರಕುಗಳನ್ನು ಸಾಗಿಸುವ ಮುನ್ನ ನಿರ್ವಹಣೆ ಮಾಡುವ 30 ಕೇಂದ್ರಗಳು (ಯುಎಲ್‌ಡಿ), ಸರಕುಗಳ ದತ್ತಾಂಶ ಸಂಗ್ರಹಿಸುವ 40 ಹ್ಯಾಂಡ್‌ಹೆಲ್ಡ್ ಟರ್ಮಿನಲ್ ಸಾಧನಗಳು ಮತ್ತು ಏಜೆಂಟರಿಗೆ ಸ್ವಯಂ ಸೇವಾ ಕಿಯೋಸ್ಕ್ ಸೌಲಭ್ಯಗಳನ್ನೊಳಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸೌಲಭ್ಯಗಳು ಇದರ ವಿಶೇಷಗಳಲ್ಲೊಂದಾಗಿದೆ. ಇದರಿಂದ ಸರಕು ಸಾಗಣೆ ಪ್ರಕ್ರಿಯೆ ಸಮಯ ಉಳಿತಾಯವಾಗುತ್ತದೆ ಜತೆಗೆ ಮಾನವನ ಅವಲಂಬನೆ ಪ್ರಮಾಣ ತಗ್ಗಲಿದೆ. ವೇಗವಾಗಿ ಮತ್ತು ಸುರಕ್ಷಿತವಾಗಿ ಸರಕು ನಿರ್ವಹಣೆ ಮಾಡಲು ಇದು ಅನುವು ಮಾಡಿಕೊಡಲಿದೆ. ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಪೂರೈಕೆ ಸರಪಳಿಗಳನ್ನು ಸುಲಭಗೊಳಿಸಿದೆ, ವಿಮಾನಯಾನ ಸಂಸ್ಥೆಗಳು, ಸರಕು ಏಜೆಂಟರು, ಅಂತಿಮ ಬಳಕೆದಾರರ ಸರಕು ನಿರ್ವಹಣಾ ಅನುಭವವನ್ನು ಹೊಸ ಟರ್ಮಿನಲ್ ದುಪ್ಪಟ್ಟುಗೊಳಿಸಿದೆ.
ನಿರ್ವಹಣಾ ಸಾಮರ್ಥ್ಯ ದುಪ್ಪಟ್ಟು: ಬೆಲೆಬಾಳುವ ವಸ್ತುಗಳು, ಪ್ರಾಣಿಗಳು, ಅಪಾಯಕಾರಿ ಸರಕುಗಳು ಮತ್ತು ವಿಕಿರಣಶೀಲ ವಸ್ತುಗಳಂತಹ ವಿಶೇಷ ಸರಕುಗಳಿಗೆ ಮೀಸಲಾದ ಶೇಖರಣಾ ಪ್ರದೇಶಗಳನ್ನು ಒಳಗೊಂಡಿದ್ದು, ಸಮಗ್ರ ಸರಕು ನಿರ್ವಹಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ. ಪರಿಸರ ಸ್ನೇಹಿಯಾಗಿ ಸ್ಕೈಲೈಟಿಂಗ್, ಸುಧಾರಿತ ವಾತಾಯನ ವ್ಯವಸ್ಥೆ, ನೀರು ಸಂರಕ್ಷಣಾ ವ್ಯವಸ್ಥೆ ಮತ್ತು ಇಂಧನ ಸಾಮಥ್‌ರ್ಯ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಇವೆಲ್ಲವೂ ಪರಿಸರದ ಮೇಲಿನ ದುಷ್ಪಾರಿಣಾಮವನ್ನು ಪರಿಣಾಮಗಾರಿಯಾಗಿ ತಗ್ಗಿಸಲಿದೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ವಾತಾವರಣ ಅಳವಡಿಸಿಕೊಳ್ಳುವ ಮೂಲಕ, ದೇಶೀಯವಾಗಿ ವಾಯುಮಾರ್ಗ ಸರಕು ಸಾಗಣೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ. ಈ ಸೌಲಭ್ಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಮುಖ ವಾಯು ಸರಕು ಸಾಗಣೆ ಕೇಂದ್ರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ.
ಸತ್ಯಕಿ ರಘುನಾಥ್, ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ವಿಮಾನ ನಿಲ್ದಾಣ
------------
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಆರಂಭವಾದ
ಪರಿಸರ ಸ್ನೇಹಿ, ವಿಶ್ವಾಸಾರ್ಹ ಮತ್ತು ಭವಿಷ್ಯದ ಸರಕು ಸಾಗಣೆ ಬೇಡಿಕೆಯನ್ನು ಪೂರೈಸುವಲ್ಲಿ ದೇಶೀಯ ಕಾರ್ಗೋ ಟರ್ಮಿನಲ್ ಪ್ರಮುಖ ಹೆಜ್ಜೆ ಇರಿಸಿದೆ.ದೇಶದಲ್ಲಿನ ವಾಯುಯಾನ ಸರಕು ಸಾಗಣೆಯಲ್ಲಿ ತ್ವರಿತ ಬೆಳವಣಿಗೆ ಬೇಡಿಕೆ ಹೆಚ್ಚುತ್ತಿದೆ ಇದು 2029 ರ ವೇಳೆಗೆ 5.8 ದಶಲಕ್ಷ ಟನ್ ತಲುಪುವ ನಿರೀಕ್ಷೆ ಇದೆ. ಇಂದಿನ ಬೇಡಿಕೆ ಪೂರೈಕೆಗಷ್ಟೇ ಅಲ್ಲದೆ, ಭವಿಷ್ಯದ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ಕಾರ್ಗೋ ಟರ್ಮಿನಲ್ ವಿನ್ಯಾಸಗೊಳಿಸಲಾಗಿದೆ.
ಚಾಲ್ಸ್ ವೈಲಿ, ಆಫ್ರಿಕಾ ಮತ್ತು ಏಷ್ಯಾ ವಿಭಾಗಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ