

ತುಮಕೂರು : ಕರೊನಾ ಸ್ಫೋಟದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರವು ಹೊಸ ಮಾರ್ಗ ಸೂಚಿಗಳನ್ನು ಹೊರಡಿಸಿದೆ. ಜ.5ರ ರಾತ್ರಿ 10 ರಿಂದ 19ರ ಬೆಳಗ್ಗೆ 5 ಗಂಟೆವರೆಗೆ ಕರೊನಾ ಹೊಸ ಕಠಿಣ ಮಾರ್ಗಸೂಚಿಗಳು ಜಾರಿಯಲ್ಲಿರಲಿವೆ. ಇನ್ನೂ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು ಅನಗತ್ಯ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು ಸೇರಿ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸೇರಿ ಎಲ್ಲ ಅಧಿಕಾರಿಗಳು, ಸಂಘ ಸಂಸ್ಥೆಗಳು ಕರೊನಾ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.
ಹೊಸ ಮಾರ್ಗಸೂಚಿಗಳನ್ವಯ ಪ್ರತಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸರ್ಕಾರದ ಎಲ್ಲ ಇಲಾಖೆಗಳು ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯನಿರ್ವಹಿಸಲಿವೆ. ಆದರೆ ಅಗತ್ಯ ಸೇವೆ ಒದಗಿಸುವ ಇಲಾಖೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಬುಧವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದರು.
ವೀಕೆಂಡ್ ಕರ್ಫ್ಯೂ ವೇಳೆ ದಿನಸಿ ಅಂಗಡಿ, ಹಾಲು, ತರಕಾರಿ, ಔಷಧ, ಪೆಟ್ರೋಲ್ ಮತ್ತಿತರರ ಅಗತ್ಯ ವಸ್ತುಗಳ ಖರೀದಿಗೆ ನಿರ್ಬಂಧ ಇರುವುದಿಲ್ಲ. ಕರ್ಫ್ಯೂ ಅವಧಿಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಇರಲಿದೆ. ಎಲ್ಲ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್, ಸಿನಿಮಾ ಮಂದಿರಗಳ ಸಾಮರ್ಥ್ಯದ ಶೇ.50 ಆಸನಗಳಿಗೆ ಮೀಸಲಿರಲಿದೆ ಎಂದು ಜೆಸಿಎಂ ಸ್ಪಷ್ಟಪಡಿಸಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಇದ್ದರು.
ಜಾತ್ರೆ, ಮೆರವಣಿಗೆ ನಿಷೇಧ : ಜಾತ್ರೆ, ಉತ್ಸವ, ಮೆರವಣಿಗೆ ನಿಷೇಧಿಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಕೈಂಕರ್ಯ ಹಾಗೂ ದೇವರ ದರ್ಶನಕ್ಕೆ ಅನುಮತಿಸಲಾಗಿದೆ. ಎರಡು ಡೋಸ್ ಲಸಿಕೆ ಪಡೆದವರ ಪ್ರಮಾಣ ಪತ್ರ ಖಚಿತಪಡಿಸಿಕೊಂಡ ನಂತರವಷ್ಟೇ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಅನುಮತಿಸಬೇಕು. ವಿಶೇಷ ಪೂಜೆಗೆ ಅವಕಾಶವಿರುವುದಿಲ್ಲ.
6 ಸಾವಿರ ಕರೊನಾ ಟೆಸ್ಟ್ : ಜಿಲ್ಲೆಯಲ್ಲಿ ಪ್ರಸ್ತುತ ಪ್ರತಿದಿನ 3500 ಕರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಪ್ರತಿದಿನ 6 ಸಾವಿರ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 76 ಕರೊನಾ ಸಕ್ರಿಯ ಪ್ರಕರಣಗಳಿದ್ದು, ಈವರೆಗೂ ಯಾವುದೇ ಒಮಿಕ್ರಾನ್ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಅಳವಡಿಸಲಾಗಿರುವ 13 ಆಕ್ಸಿಜನ್ ಉತ್ಪಾದನಾ ಘಟಕಗಳ ಪೈಕಿ 9 ಆಕ್ಸಿಜನ್ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 600 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಲಭ್ಯವಿರುವುದರಿಂದ ಹಳ್ಳಿಗಳಲ್ಲಿರುವ ಆಸ್ಪತ್ರೆಗಳಲ್ಲಿಯೂ ಆಕ್ಸಿನೇಟೆಡ್ ಬೆಡ್ ವ್ಯವಸ್ಥೆಗೊಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಆಯಾ ಶಾಲಾ-ಕಾಲೇಜುಗಳಲ್ಲಿ 15-18ವರ್ಷದ 50 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಪ್ರತಿದಿನ 20,000 ಮಕ್ಕಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಸಿದ್ದರಾಮೇಶ್ವರ ಜಯಂತಿ ರದ್ದು : ತಿಪಟೂರು ತಾಲೂಕಿನ ಪ್ರಸಿದ್ಧ ಕೆರೆಗೋಡಿ ರಂಗಾಪುರದಲ್ಲಿ ಜ.14ರಂದು ನಡೆಯಬೇಕಿದ್ದ ಶಿವಯೋಗಿ ಸಿದ್ದರಾಮೇಶ್ವರರ 849ನೇ ಜಯಂತಿ ರದ್ದುಪಡಿಸಲು ಅಧಿಕಾರಿಗಳಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ನಿರ್ದೇಶನ ನೀಡಿದ್ದಾರೆ. ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಶಾಲಾ-ಕಾಲೇಜು ಮುಚ್ಚುವ ನಿರ್ಣಯ ಇಲ್ಲ : ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಣಯವನ್ನು ಈವರೆಗೂ ಕೈಗೊಂಡಿಲ್ಲ. ಬೆಂಗಳೂರು ನಗರದಲ್ಲಿ ಮಾತ್ರ 10 ರಿಂದ 12ನೇ ತರಗತಿ ಸೇರಿ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಹೊರತುಪಡಿಸಿ ಇನ್ನಿತರ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಎಸ್‌ಐಟಿ ಕಾಲೇಜಿನ 8 ವಿದ್ಯಾರ್ಥಿಗಳಿಗೆ ಸೋಂಕು : ಜಿಲ್ಲೆಯಲ್ಲಿ ಮತ್ತೆ ಕರೊನಾ ಸ್ಫೋಟವಾಗಿದೆ. ಬುಧವಾರ ಒಂದೇ ದಿನ 43 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುಮಕೂರು ತಾಲೂಕಿನಲ್ಲೇ 27 ಜನರಲ್ಲಿ ಸೋಂಕು ದೃಢಪಟ್ಟಿದ್ದು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ 8 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಇವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಭೌತಿಕ ತರಗತಿಗಳನ್ನು ರದ್ದುಪಡಿಸಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ. ತಿಪಟೂರು-6, ಕೊರಟಗೆರೆ-3, ಚಿಕ್ಕನಾಯಕನಹಳ್ಳಿ-3, ಮಧುಗಿರಿ-3 ಹಾಗೂ ಪಾವಗಡ ತಾಲೂಕಿನಲ್ಲಿ 1 ಪ್ರಕರಣ ವರದಿಯಾಗಿದೆ.