

ದಾವಣಗೆರೆ: ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದಿಂದ ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಜ.16ರಿಂದ 25ರವರೆಗೆ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಏಕಾಂಕ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆ ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವ ಜನರಲ್ಲಿ ನಾಟಕಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ರಂಗಾಯಣದ ಕಚೇರಿ ತೆರೆದಿದ್ದು ಅಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಉತ್ತಮವಾದ 3 ನಾಟಕಗಳನ್ನು ಆಯ್ದು ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ, ದ್ವಿತೀಯ 7,500, ತೃತೀಯ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.
ಉತ್ತಮ ನಟ, ನಟಿ, ನಿರ್ದೇಶಕ, ಬರಹಗಾರ, ಸಂಗೀತ ತಜ್ಞ ಹೀಗೆ 10 ವೈಯಕ್ತಿಕ ಬಹುಮಾನ ನೀಡಲಾಗುವುದು. ಭಾಗವಹಿಸುವ ಪ್ರತಿ ವಿದ್ಯಾರ್ಥಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ವೈಯಕ್ತಿಕ ಬಹುಮಾನ ತಲಾ 1 ಸಾವಿರ ರೂ. ನೀಡಲಾಗುವುದು. ಶಾಲೆ ಮತ್ತು ಕಾಲೇಜು ಎಂಬ ಪ್ರತ್ಯೇಕ ವಿಭಾಗ ಮಾಡಲಾಗಿದೆ ಎಂದು ಹೇಳಿದರು.
ಶಾಲಾ ಕಾಲೇಜು ಪಠ್ಯಾಧಾರಿತ ಅಥವಾ ದೇಶಭಕ್ತಿಯ ಕಥಾವಸ್ತು ಹೊಂದಿದ ಏಕಾಂಕಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ದೂ. 08192-200635 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.