

ವಿಜಯಪುರ: ರಂಗಭೂಮಿ, ಕಲೆ, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಕಾಪಾಡಿದವರು ಕಲಾವಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ 8ನೇ ವಾರ್ಷಿಕೊತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನೀಕರಣದ ಭರಾಟೆಯಲ್ಲಿ ಕಲಾವಿದರ ಬದುಕು ಛಿದ್ರವಾಗಿದೆ. ವೃತ್ತಿ ರಂಗಭೂಮಿಯ ಕಲಾವಿದರು ಗುಣಮಟ್ಟದ ಕಲೆಗೆ ಮಹತ್ವ ನೀಡಿಬೇಕು ಎಂದರು.
ರಂಗಭೂಮಿ ಕಲಾವಿದ ಸಂಗಮೇಶ ಬಾದಾಮಿ ಮಾತನಾಡಿ, ವೃತ್ತಿ ರಂಗಭೂಮಿ ಕಲೆ ಪವಿತ್ರವಾದದು. ನಾಟಕ ಕಲೆ ಸಮೃದ್ಧವಾಗಿ ಬೆಳೆದು ಸಮಾಜದಲ್ಲಿ ಬದಲಾವಣೆ ತರುವ ಪರೋಕ್ಷ ಕೆಲಸ ಮಾಡುತ್ತಿತ್ತು. ಕಲೆಗೆ ಬೆಲೆ ಇಲ್ಲದಂತಾಗಿದೆ. ನಾಟಕ ಕಂಪನಿಗಳ ಆರ್ಥಿಕ ಪರಿಸ್ಥಿತಿ ಕಳವಳಕಾರಿಯಾಗಿದೆ. ರಂಗಭೂಮಿ ಕಲಾವಿದರನ್ನು ಗೌರವಿಸಬೇಕು ಎಂದು ತಿಳಿಸಿದರು.
ಚಿಂದೋಡಿ ಶ್ರೀಕಂಠೇಶ್ವರ ಮಾತನಾಡಿ, ವೃತ್ತಿ ರಂಗಭೂಮಿಯ ಕಲಾವಿದರನ್ನು ಸರ್ಕಾರ ಕಡೆಗಣಿಸುತ್ತಾ ಬಂದಿದೆ. ವಿಜಯಪುರನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ಆರಂಭಿಸಬೇಕು. ಇಲ್ಲದೆ ಹೋದರೆ ಆ ಆಸ್ತಿ ಇನ್ನೊಬ್ಬರ ಪಾಲಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ವೃತ್ತಿರಂಗಭೂಮಿ ಮಾಲೀಕರ ಸಂಘ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ ಮಾತನಾಡಿ, ರಂಗಭೂಮಿ ಕಲಾವಿದರು ಹಾಗೂ ನಾಟಕ ಕಂಪನಿ ಮಾಲೀಕರು ಹಿತವನ್ನು ಕಾಯಬೇಕು. ಎಲ್ಲ ಜಿಲ್ಲೆಗಳಲ್ಲಿ ನಾಟಕ ಮಂದಿರ ಆರಂಭಿಸಬೇಕು. ಸರ್ಕಾರ ವೃತ್ತಿ ರಂಗಭೂಮಿಯ ಕಲಾವಿದರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಮಹಾದೇವ ಸಿದ್ದು ನಾಲತವಾಡ, ಪ್ರೇಮಾ ಪಾಟೀಲ, ಮಂಜುನಾಥ ಜಾಲಿಹಾಳ, ಬಸವರಾಜ ಬೆಂಗೇರಿ, ಪ್ರವೀಣ್ ಬಾಗಲಕೋಟೆ, ರಾಜಣ್ಣ ಜೇವರಗಿ, ರೇವಣಸಿದ್ದೇಶ್ವರ ಹೊಸಮಠ, ಅಯ್ಯಣ್ಣಸ್ವಾಮಿ, ರವೀಂದ್ರ ಬೆನಕಟ್ಟಿ, ಅಪ್ಪಾಜಿಗೌಡ ಬಿರಾದಾರ, ಶ್ರೀಧರ ಹೆಗಡೆ ಇನ್ನಿತರರಿದ್ದರು.