

ವಿಜಯವಾಣಿ ಸುದ್ದಿಜಾಲ ತುಮಕೂರು
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ಹೃದ್ರೋಗ ಕೇಂದ್ರ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಎಸ್.ಮಾಲ್ ಬಳಿ ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ 6.65 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಿಸಿರುವ ಅಮಾನಿಕೆರೆ ಕೋಡಿ ಸೇತುವೆಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜಿಲ್ಲೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಲು ಕನಿಷ್ಠ 2 ಗಂಟೆ ಬೇಕಾಗುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಮೃತಪಡುವ ಸಾಧ್ಯತೆಯಿರುತ್ತದೆ. ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸುವುದರಿಂದ ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಶಿವಮೊಗ್ಗ, ಹಾಸನ, ಚಿತ್ರದುರ್ಗ ಮುಂತಾದ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ ಎಂದರು.
ವಿಧಾನ ಪರಿಷ್ತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಲೋಕೋಪಯೋಗಿ ಇಲಾಖೆ ಇಇ ಮಂಜಪ್ಪ, ಅಧೀಕ್ಷಕ ಇಂಜಿನಿಯರ್ ಜಿ.ಸಿ.ಜಗದೀಶ್, ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ರಾಜಕಾರಣ ಮಾಡಲ್ಲ: ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾನೆಂದಿಗೂ ರಾಜಕಾರಣ ಮಾಡುವುದಿಲ್ಲ. ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರವನ್ನು ಆರ್ಥಿಕ ಹಬ್ ಆಗಿ ಅಭಿವೃದ್ಧಿಗೊಳಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಹೊಸ -ಹೊಸ ಕೈಗಾರಿಕೆ ಸೆಳೆಯಬೇಕು. ತುಮಕೂರು ವಿವಿಯ ನೂತನ ಕ್ಯಾಂಪಸ್ ಅನ್ನು ಶೀಘ್ರ ಉದ್ಘಾಟಿಸಬೇಕು. ಮುಂದಿನ ಮೂರೂವರೆ ವರ್ಷದೊಳಗೆ ಮೆಟ್ರೋ ರೈಲು ನಗರಕ್ಕೆ ಬರಬೇಕೆಂಬ ಆಶಯವನ್ನು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ವ್ಯಕ್ತಪಡಿಸಿದರು.
3 ಸಾವಿರಕ್ಕೂ ಹೆಚ್ಚು ಉದ್ಯೋಗ: ಮುಂದಿನ ದಿನಗಳಲ್ಲಿ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 3 ಸಾವಿರ ಹಾಗೂ ಗುಬ್ಬಿ ತಾಲೂಕಿನ ಎಚ್ಎಎಲ್ ಘಟಕದಲ್ಲಿ 6500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆಗೆ ವಿಸ್ತತ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ವಿಶ್ವಾಸವಿದೆ. ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಿದ್ದು, ನಮ್ಮ ಸರ್ಕಾರವು ಜಿಲ್ಲೆಯ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದು ಪರಮೇಶ್ವರ ತಿಳಿಸಿದರು.
ಭೀಮಸಂದ್ರ ಸೇತುವೆಗೆ ಕಾಯಕಲ್ಪ: ಗುಬ್ಬಿ ರಸ್ತೆಯಲ್ಲಿರುವ ಭೀಮಸಂದ್ರದ ಸೇತುವೆ ಕಿರಿದಾಗಿದ್ದು, ಇದನ್ನು ವಿಸ್ತರಣೆ ಕಾಮಗಾರಿಯನ್ನು ಸದ್ಯದಲ್ಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಪರಮೇಶ್ವರ ತಿಳಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಕೇವಲ 6 ವಾರ್ಡ್ಗಳನ್ನು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಉಳಿದ 29 ವಾರ್ಡ್ಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಇಲ್ಲಿ ಮೂಲಸೌಕರ್ಯ ಕಲ್ಪಿಸಲು 100 ಕೋಟಿ ರೂಪಾಯಿ ಅನುದಾನ ಮೀಸಲಿಡಲು ತೀಮಾರ್ನಿಸಲಾಗಿದೆ ಎಂದರು.
ಜಿಲ್ಲಾಸ್ಪತ್ರೆಗೆ ಹೈಟೆಕ್ ಸ್ಪರ್ಶ : ಕಲ್ಲಿನ ಕಟ್ಟಡದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು 130 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇತ್ತೀಚೆಗೆ ತುಮಕೂರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿನಿಲಯ ನಿರ್ಮಿಸಲು 50 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದು, ಇದಕ್ಕಾಗಿ ತುಮಕೂರು ವಿವಿ ಆವರಣದೊಳಗೆ ಸ್ಥಳ ಗುರುತಿಸಲಾಗಿದೆ. ಇದಲ್ಲದೆ, ಶೈಕ್ಷಣಿಕ ನಗರವೆನಿಸಿಕೊಂಡಿರುವ ಜಿಲ್ಲಾಕೇಂದ್ರ ತುಮಕೂರಿನಲ್ಲೇ ಹಾಸ್ಟೆಲ್ಗಳ ಕೊರತೆ ಇದೆ. ಜಿಲ್ಲೆಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 12 ನೂತನ ಹಾಸ್ಟೆಲ್ ನಿರ್ಮಿಸಲು ಶೀಘ್ರದಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ಪರಮೇಶ್ವರ ಹೇಳಿದರು.
ಅತಿಥಿಗೃಹ ನಿಮಾರ್ಣಕ್ಕೆ ಚಾಲನೆ: ತುಮಕೂರು: ನಗರದ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿರುವ ಯಾತ್ರಿ ನಿವಾಸದ ಪಕ್ಕ 4.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅತಿಥಿ ಗೃಹ ನಿಮಾರ್ಣಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಹೆಮ್ಮೆ ಎನ್ನಿಸಿರುವ ಶ್ರೀಸಿದ್ಧಗಂಗಾ ಮಠಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಭಕ್ತರು ಹಾಗೂ ಗಣ್ಯ ವ್ಯಕ್ತಿಗಳು ತಂಗಲು ಅನುಕೂಲವಾಗುವಂತೆ ಆಧುನಿಕ ಅತಿಥಿಗೃಹ ನಿಮಾರ್ಣಕ್ಕೆ ಸರ್ಕಾರ ಮುಂದಾಗಿದ್ದು, ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿ.ಸುರೇಶ್ಗೌಡ ಇತರರು ಇದ್ದರು.
ವಸಂತ ನರಸಾಪುರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಎಸ್.ಮಾಲ್ ಬಳಿಯ ಈ ಸೇತುವೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ಸೇತುವೆ ಮರು ನಿಮಾರ್ಣದಿಂದ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುವಾಗಲಿದೆ.| ಕೆ.ಎನ್.ರಾಜಣ್ಣ, ಸಹಕಾರ ಸಚಿವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಿಂದೆ ಯಾವುದೇ ರಾಜಕಾರಣವಿಲ್ಲ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳು ನಿಂತಿವೆ ಎಂಬ ಟೀಕೆಗಳು ಬರುತ್ತಲೇ ಇವೆ. ಆದರೆ, ಇತ್ತೀಚೆಗಷ್ಟೇ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಚಾಲನೆ ನೀಡಿದ ಎತ್ತಿನಹೊಳೆ ಮೊದಲ ಹಂತದ ಯೋಜನೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಹಿಡಿದ ಕೈಗನ್ನಡಿ.| ಡಾ.ಜಿ.ಪರಮೇಶ್ವರ, ಗೃಹ ಸಚಿವ ಸೇತುವೆಯು ವಾಹನ ಸಂಚಾರಕ್ಕೆ ಲೋಕಾರ್ಪಣೆ ಗೊಂಡಿರುವುದು ಸಂತಸ ತಂದಿದೆ. ನಗರದ ಕುಡಿಯವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನದ ಅಗತ್ಯವಿದ್ದು, ನಗರಾಭಿವೃದ್ಧಿ ಸಚಿವರ ಜತೆ ಪರಮೇಶ್ವರ ಅವರು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.| ಜ್ಯೋತಿಗಣೇಶ್, ನಗರ ಶಾಸಕ