

ಹೊಸಪೇಟೆ: ನಗರದಲ್ಲಿ ಜಿಲ್ಲಾ ಆಸ್ಪತ್ರೆ ಉನ್ನತೀಕರಣದ ಜತೆಗೆ ಈ ಭಾಗದ ಜನರಿಗೆ ಅನುಕೂಲ ಆಗುವಂತೆ ಹೃದಯ ಸಂಬಂಧಿ ಕಾಯಿಲೆಗೆ ಕಾರ್ಡಿಯಾಟಿಕ್ ಸರ್ಜರಿ ವ್ಯವಸ್ಥೆಗೆ ಯೋಜನೆ ರೂಪಿಸಲಾಗುತ್ತದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನ ಕ್ರಮ ಜತೆಗೆ ಚಿಕಿತ್ಸಾ ಕ್ರಮ ಸಹ ಹಂತ ಹಂತವಾಗಿ ಬದಲಾಗುತ್ತಿದೆ. ಅತ್ಯುನ್ನತ ವೈದ್ಯಕೀಯ ಸೌಲಭ್ಯ ಈ ಭಾಗದಲ್ಲೂ ದೊರೆಯಬೇಕು.
ಎಲ್ಲ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯುಷ್ಮಾನ್ ಭವ ಕಾರ್ಯಕ್ರಮ ರೂಪಿಸಿದ್ದು, ಸಮರ್ಪಕ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಿಸಬೇಕು ಎಂದರು.
ಡಿಎಚ್‌ಒ ಡಾ.ಶಂಕರ್ ನಾಯ್ಕ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಎಲ್ಲರಿಗೂ ಆರೋಗ್ಯದ ಸೇವಾ ಸೌಲಭ್ಯ ದೊರೆಯಲು ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು!
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ ಮಾತನಾಡಿ, ಸೆ.17 ರಿಂದ ಕಾರ್ಯಕ್ರಮ ಜಾರಿಯಾಗಲಿದ್ದು, ಮೂರು ಹಂತಗಳಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮ ನಡೆಯಲಿದೆ.
ಮೊದಲ ಹಂತದಲ್ಲಿ ಮನೆಮನೆಗೆ ತೆರಳಿ ಅಭಾ ಕಾರ್ಡ್ ನೋಂದಣಿ ಕೈಗೊಳ್ಳುವುದರ ಜತೆಗೆ ಕಾರ್ಡಿನ ಮೂಲಕ ದೊರಕುವ ಸೌಲಭ್ಯದ ಮಾಹಿತಿ ನೀಡಲಾಗುತ್ತದೆ. ಆಯುಷ್ಮಾನ್ ಮೇಳ, ಆಯುಷ್ಮಾನ್ ಸಭಾ ಕಾರ್ಯಕ್ರಮ ಸಹ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ನಿಕ್ಷಯ ಮಿತ್ರ ಅಡಿಯಲ್ಲಿ 313 ಜನರನ್ನು ದತ್ತು ಪಡೆದು ಪೌಷ್ಟಿಕ ಆಹಾರ ವಿತರಿಸಿದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.