ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆ: ಜಯದೇವ ಆಸ್ಪತ್ರೆಯೊಂದಿಗೆ ಕೆಎಸ್‌ಆರ್‌ಟಿಸಿ ಒಡಂಬಡಿಕೆ

ksrtc
Published on

ಬೆಂಗಳೂರು: ಕೆಎಸ್‌ಆರ್‌ಟಿ ಸಿ ತನ್ನ ಸಿಬ್ಬಂದಿಗೆ ಹತ್ತು ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಐದು ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.


ಶಾಂತಿನಗರದಲ್ಲಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ.


ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇಂದು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ನಿಗಮವು ಒಡಂಬಡಿಕೆ ಮಾಡಿಕೊಂಡಿದ್ದು, ಹೃದಯ ಸಂಬಂಧಿ ತಪಾಸಣೆಗಳನ್ನು/ ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸುವುದರಿಂದ ಸಂಭವನೀಯ ಹೃದಯಾಘಾತವನ್ನು ತಪ್ಪಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಜೀವಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು.

ಅಗತ್ಯಚಿಕಿತ್ಸೆ ಕೊಡುವ ಜವಾಬ್ದಾರಿ ನಮ್ದು:
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿದೇರ್ಶಕ ಡಾ.ಸಿ.ಎನ್ ಮಂಜುನಾಥ್ ಮಾತನಾಡಿ, ಮನುಷ್ಯನ ಆರೋಗ್ಯ ಬಹಳ ಮುಖ್ಯವಾಗಿದ್ದು, ಅದನ್ನು ಬೆಲೆ ಕೊಟ್ಟು ಕೊಂಡುಕೊಳ್ಳಲಾಗದು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಮಾಣ ಅತಿ ಹೆಚ್ಚಳವಾಗಿದ್ದು ಚಿಕ್ಕ ವಯಸ್ಸಿನವರಲ್ಲಿ ಇದು ಅಧಿಕವಾಗಿದೆ. ವಯಸ್ಸಾದ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿ ಎದುರಾಗಿದೆ ಎಂದರು.
ಬಿಎಂಟಿಸಿಯಲ್ಲಿಯೂ ಈ ಯೋಜನೆಯಿದ್ದು, ಅಲ್ಲಿ ೪೫ ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಈ ಯೋಜನೆಗೆ ಒಳಪಡುತ್ತಾರೆ. ಆದರೆ ಕೆಎಸ್‌ಆರ್‌ಟಿಸಿಯಲ್ಲಿ ೪೦ ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಈ ಯೋಜನೆ ಅನುಷ್ಠಾನ ಮಾಡಿರುವುದು ಒಳ್ಳೆಯದು. ಏಕೆಂದರೆ ಈಗ ೪೦ ರ ಆಸುಪಾಸಿನಲ್ಲಿಯೇ ಹೃದಯ ಸಂಬಂಧಿ ತೊಂದರೆಗಳು ಹೆಚ್ಚು ವರದಿಯಾಗುತ್ತಿವೆ ಎಂದು ಹೇಳಿದರು.


ನಿಗಮವು ನಮ್ಮ ಜಯದೇವ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇನ್ನು ಮುಂದೆ ಸಿಬ್ಬಂದಿಯ ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸಿ ಅಗತ್ಯಚಿಕಿತ್ಸೆ ಕೊಡುವ ಜವಾಬ್ದಾರಿ ನಮ್ಮ ಸಂಸ್ಥೆಯ ಮೇಲಿದ್ದು, ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಪ್ರತ್ಯೇಕವಾಗಿ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ನಮ್ಮ ಸಂಸ್ಥೆಯ ಮೈಸೂರಿನ ಕೇಂದ್ರದಲ್ಲಿಯೂ ಸಹ ಅಲ್ಲಿಗೆ ಸಮೀಪವಿರುವ ವಿಭಾಗಗಳ ಸಿಬ್ಬಂದಿಗೆ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.


ಶೇ.೭೩ ಕಾರ್ಮಿಕರಿಗೆ ಅನುಕೂಲ:
ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾತನಾಡಿ, ಈಗಾಗಲೇ ನಿಗಮದ ಸಿಬ್ಬಂದಿಗೆ ಹಾಗೂ ಅವರ ಕುಟುಂಬದ ಹಿತ ದೃಷ್ಟಿಯಿಂದ ಹಲವು ಕಾಮಿಕ ಕಲ್ಯಾಣ ಕಾರ್ಯಕ್ರಮಗಳನ್ನು ನಿಗಮವು ಜಾರಿಗೆ ತಂದಿದ್ದು, ಮುಂದುವರಿದ ಭಾಗವಾಗಿ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ೪೦ ವರ್ಷ ಮೇಲ್ಪಟ್ಟ ೨೧ ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಈ ಯೋಜನೆಯು ಉಪಯೋಗವಾಗಲಿದ್ದು, ತಪಾಸಣೆಗೆ ಒಳಗಾಗುವ ಪ್ರತಿ ನೌಕರರ ಪರವಾಗಿ ನಿಗಮವು ೧೨೦೦ ರೂ.ಗಳನ್ನು ಅಂದರೆ ವಾರ್ಷಿಕ ೨.೫೫ ಕೋಟಿಯನ್ನು ಜಯದೇವ ಆಸ್ಪತ್ರೆಗೆ ಪಾವತಿ ಮಾಡುತ್ತದೆ. ಈ ಯೋಜನೆಯು ಅಂದಾಜು ಶೇ.೭೩ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿಗಮದಲ್ಲಿ ಸೇವೆಯಲ್ಲಿ ಇರುವಾಗ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಸಿಬ್ಬಂದಿಯ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ೧ ಕೋಟಿ ರೂ. ಪರಿಹಾರ ಮೊತ್ತವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ ದಳ) ಡಾ. ನಂದಿನಿ ದೇವಿ ಸೇರಿ ಇತರರು ಹಾಜರಿದ್ದರು.

ಸಿಬ್ಬಂದಿಯು ನಿಗಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ ಕೂಡ ಆಗಿದೆ. ಡಾ. ಮಂಜುನಾಥ್ ಅವರು ಕಡಿಮೆ ದರದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

ಮನುಷ್ಯನ ದೇಹವೇ ಅವನ ಪ್ರಮುಖ ಬಾಳ ಸಂಗಾತಿಯಾಗಿದ್ದು ಅದನ್ನು ಯಾವುದೇ ಕಾಯಿಲೆಗಳಿಂದ ರಕ್ಷಿಸಿಕೊಳ್ಳುವುದು ಅವರ ಪ್ರಮುಖ ಜವಾಬ್ದಾರಿ ಆಗಿರುತ್ತದೆ.
ಡಾ.ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿದೇರ್ಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net