

ಬಾಳೆಹೊನ್ನೂರು: ಏಲಕ್ಕಿ ಮತ್ತು ಕಾಳುಮೆಣಸು ಕೃಷಿಯಲ್ಲಿ ರಾಜ ಮತ್ತು ರಾಣಿಯ ಸ್ಥಾನ ಪಡೆದಿವೆ ಎಂದು ಸಕಲೇಶಪುರದ ಸಾಂಬಾರ ಮಂಡಳಿ ಉಸ್ತುವಾರಿ ಮುಖ್ಯಸ್ಥ ಡಾ.ಕೆ.ಎಂ.ಹರ್ಷ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೊಪ್ಪದ ಸಾಂಬಾರ ಮಂಡಳಿ ಸಹಯೋಗದಲ್ಲಿ ಏಲಕ್ಕಿ, ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆ ಬಗ್ಗೆ ರೈತರಿಗಾಗಿ ಆಯೋಜಿಸಿದ್ದ ಮಾಹಿತಿ ಶಿಬಿರದಲ್ಲಿ ಮಾತನಾಡಿ, ಏಲಕ್ಕಿ ಹಾಗೂ ಕಾಳುಮೆಣಸು ರೈತರಿಗೆ ವರದಾನವಾಗಿದೆ. ಏಲಕ್ಕಿ ಪ್ರಸ್ತುತ 2800 ರೂ. ಧಾರಣೆಯಿದ್ದು, ಇದು 3500 ರೂ.ರವರೆಗೆ ತಲುಪುವ ನಿರೀಕ್ಷೆಯಿದೆ. ಬೆಳೆಗಾರರು ಏಲಕ್ಕಿ ಪ್ರತಿ ಗಿಡದ ಉತ್ಪಾದನೆ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಹಸಿರು ಏಲಕ್ಕಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದು, ಕೊಯ್ಲು ಮಾಡಿದ ನಂತರ ಬಣ್ಣ ಉಳಿಸಿಕೊಳ್ಳಲು ಆದ್ಯತೆ ನೀಡಬೇಕು. ಡ್ರ್ತ್ರೈಯರ್‌ನಲ್ಲಿಯೇ ಏಲಕ್ಕಿ ಒಣಗಿಸಲು ಕ್ರಮವಹಿಸಬೇಕು ಎಂದರು.
ಕಾಳುಮೆಣಸಿನ ಉತ್ತಮ ಬೆಳೆಗೆ ಮಣ್ಣಿನ ತೇವಾಂಶ ಕಾಪಾಡಿಕೊಳ್ಳುವುದು ಅಗತ್ಯ. ಕಾಲಕಾಲಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡಬೇಕು. ಇಬ್ಬನಿ ಹೆಚ್ಚು ಬೀಳುವ ಸಮಯದಲ್ಲಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಬೇಕು. ಏಪ್ರಿಲ್, ಮೇ, ಜೂನ್‌ನಲ್ಲಿ ಉಷ್ಣಾಂಶ 32ಡಿಗ್ರಿ ದಾಟಲಿದ್ದು, ಈ ವೇಳೆ ಅಗತ್ಯ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು.
ಪಿಎಸಿಎಸ್ ಉಪಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ಸಿಇಒಎಚ್.ಉಮೇಶ್, ಸಾಂಬಾರು ಮಂಡಳಿ ಕ್ಷೇತ್ರಾಧಿಕಾರಿ ಆಶಾ ವಾಸುದೇವನ್, ಪಿಎಸಿಎಸ್ ನಿರ್ದೇಶಕರಾದ ಹಿರಿಯಣ್ಣ, ಕೆ.ಕೆ.ವೆಂಕಟೇಶ್, ಲೀಲಾವತಿ, ರಾಜಪ್ಪಗೌಡ, ಕೆ.ಟಿ.ವೆಂಕಟೇಶ್, ಎಚ್.ಎಂ.ವೆಂಕಟೇಶ್, ಸತೀಶ್, ಪ್ರಮೀತ್ ಮತ್ತಿತರರು ಹಾಜರಿದ್ದರು.