

ಸಾಲಿಗ್ರಾಮ: ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ಬಡ ಜನರಿಗೆ ತಲುಪಿಸಲಾಗುತ್ತಿದೆ ಪಡಿತರ ಪಡೆಯುವ ಫಲಾನುಭವಿಗಳು ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಪಡಿತರ ಚೀಟಿ ರದ್ದುಪಡಿಸಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಉದಯ ಶಂಕರ್ ಹೇಳಿದರು.
ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಗ್ರಾಮ ಮಟ್ಟದ ಸಭೆಯಲ್ಲಿ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಮಾಲೀಕರು ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅವರಿಗೆ ಯಾವುದಾದರೂ ಸಣ್ಣ, ಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಪರಿಹಾರಕ್ಕೆ ಮುಂದಾಗಬೇಕು. ಪಡಿತರ ಚೀಟಿದಾರರು ಹಿಂಜರಿಕೆ ಬಿಟ್ಟು ತಮಗೆ ಬರಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಹಿಸದ ವಿರೋಧ ಪಕ್ಷಗಳು ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿವೆ. ಆದರೆ ನಮ್ಮ ಸರ್ಕಾರ ನುಡಿದಂತೆ ನಡೆಯುವ ಮೂಲಕ ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡುತ್ತಿದೆ. ಕ್ಷೇತ್ರದ ಜನರು ಯಾವುದೇ ಸಮಸ್ಯೆಗಳಿದ್ದರೂ ಲಿಖಿತವಾಗಿ ಮಾಹಿತಿ ನೀಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಂಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು, ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ನಿರೀಕ್ಷಕ ಸುರೇಶ್, ಕುಮಾರ್, ಪಿಡಿಒ ನವೀನ್, ನ್ಯಾಯಬೆಲೆ ಅಂಗಡಿ ಮಾಲೀಕರಾದ ಎ.ಟಿ.ಗೋಪಾಲ್, ಶ್ರೀನಿವಾಸ, ಡಿಸಿಸಿ ಸದಸ್ಯ ಅಶ್ವಥ್ ನಾರಾಯಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಲೋಕೇಶ, ಮಹಾಲಿಂಗು, ಮೋಹನ್, ರವಿ, ಚಿಕ್ಕಹನಸೋಗೆ ಮೂರ್ತಿ, ಅನಿಲ್, ವಾಸಿಂ, ಮುಖಂಡರಾದ ನಟರಾಜು, ಸುನಂದಮ್ಮ, ಶಿವರಾಜು, ಆರ್‌ಟಿಸಿ ರಾಜೇಗೌಡ, ಕೃಷ್ಣಶೆಟ್ಟಿ, ಸಣ್ಣರಾಮೇಗೌಡ, ಮಹೇಶ್, ಶೀತಲ್, ಬೈರೇಶ್, ಮೂರ್ತಿ, ವಡ್ಡರಕೊಪ್ಪಲು ಗಿರೀಶ್ ಇದ್ದರು.