

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಹೊನ್ನಾಳಿ ರಸ್ತೆ ಸಿದ್ದನಪುರದಲ್ಲಿ ಕಾರು ಮತ್ತು ನೀರಿನ ಟ್ಯಾಂಕರ್ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿಕಾರಿಪುರ ಪಟ್ಟಣದ ಹಳಿಯೂರು ಹೊಸಕೇರಿ ನಿವಾಸಿ ಸೈಯದ್ ಇಸ್ಮಾಯಿಲ್ (65) ಹಾಗೂ ಪುತ್ರಿ ಅಬೀಬಾ (35) ಮೃತರು. ಗಾರೆ ಮೇಸ್ತ್ರಿ ಆಗಿರುವ ಸೈಯದ್ ಅವರು ತಮ್ಮ ಮೊಮ್ಮಗಳನ್ನು ತುಮಕೂರಿನ ವಸತಿ ಶಾಲೆಗೆ ಬಿಟ್ಟು ಬರಲು ಕಾರಿನಲ್ಲಿ ಶನಿವಾರ ಬೆಳಗ್ಗೆ ತೆರಳುತ್ತಿದ್ದಾಗ ಏಕಾಏಕಿ ಅಡ್ಡರಸ್ತೆಯಿಂದ ನೀರಿನ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಮುಖ್ಯ ರಸ್ತೆ ಕಡೆ ಚಲಿಸಿ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಸೈಯದ್ ಇಸ್ಮಾಯಿಲ್ ಹಾಗೂ ಅಬೀಬಾ ಸ್ಥಳದಲ್ಲೇ ಮೃತಪಟ್ಟಿದ್ದು ಪತ್ನಿ, ಮೊಮ್ಮಗಳು ಹಾಗೂ ಕಾರು ಚಾಲಕನಿಗೆ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.