ಕಾರು ಸುಲಿಗೆಕೋರನಿಗೆ ಕಠಿಣ ಶಿಕ್ಷೆ

court
Published on

ಹುಬ್ಬಳ್ಳಿ: ಕಾರು ಸುಲಿಗೆ ಮಾಡಿದ್ದ ಆರೋಪಿಗೆ ಇಲ್ಲಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಠಿಣ ಶಿಕ್ಷ ಹಾಗೂ 50 ಸಾವಿರ ರೂ. ದಂಡ, 7 ವರ್ಷ ಶಿಕ್ಷ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ದಂಡ ತುಂಬಲು ತಪ್ಪಿದಲ್ಲಿ 1 ವರ್ಷ ಸಾದಾ ಶಿಕ್ಷೆ ವಿಧಿಸಿ ದಂಡದ ಮೊತ್ತದ ಪೈಕಿ 70 ಸಾವಿರ ರೂ. ಗಾಯಾಳುವಿಗೆ ನೀಡುವಂತೆ ಆದೇಶಿಸಿದೆ. ಶ್ರೀಧರ ಎನ್. ಅಲಿಯಾಸ್ ಶ್ರೀ ಎನ್ನುವಾತನಿಗೆ ಈ ಶಿಕ್ಷೆ ವಿಧಿಸಿದ್ದು, ಇನ್ನಿಬ್ಬರು ಸುಲಿಗೆಕೋರರ ವಿಚಾರಣೆ ಬಾಕಿ ಇದೆ.

ಏನಿದು ಪ್ರಕರಣ?: 2015 ಡಿಸೆಂಬರ್ 8ರಂದು ಮಧ್ಯಾಹ್ನ 12.40 ರ ಸುಮಾರಿಗೆ ಇಲ್ಲಿಯ ಚನ್ನಮ್ಮ ಮೈದಾನ(ಈದ್ಗಾ)ಕ್ಕೆ ಆಗಮಿಸಿದ ಸುಲಿಗೆಕೋರರಾದ ಬೆಂಗಳೂರು ಮೂಲದ ಶ್ರೀಧರ ಎನ್. ಅಲಿಯಾಸ್ ಶ್ರೀ, ನಿತಿನ್ ಅಲಿಯಾಸ್ ಜೋಸೆಫ್ ಹಾಗೂ ರಾಜೇಶ ಕೂಡಿಕೊಂಡು ಗೋರ್ಕಣಕ್ಕೆ ಹೋಗಲು ಕಾರ್ ಬಾಡಿಗೆ ಪಡೆಯುತ್ತಾರೆ.

ಯಲ್ಲಾಪುರ -ಅಂಕೋಲಾ ಮಾರ್ಗ ಮಧ್ಯದ ರಾಮನಗುಳಿ ದಾಟಿದಾಗ ಕಾರಿನಿಂದ ಗೇರ್ ಬಾಕ್ಸ್ ಕಳಚಿ ಬೀಳುತ್ತದೆ. ಆಗಾ ಚಾಲಕ ಯಲ್ಲಾಪುರ ಓಣಿಯ ಜಮೀಲ್ ಅಹ್ಮದ್ ಮಸಳಿ ಕಾರ್ ಇಳಿದು ಮರಳಿ ಹತ್ತುವ ವೇಳೆ ಚಾಲಕನ ಸೀಟಿನಲ್ಲಿ ಕುಳಿತಿದ್ದ ಎ1 ಆರೋಪಿ ನಿತಿನ್, ಜಮೀಲ್ ಅಹ್ಮದ್‌ಗೆ ಚಾಕುವಿನಿಂದ ತಿವಿದರೆ ಇನ್ನಿಬ್ಬರು ಸೇರಿ ಹಲ್ಲೆ ಮಾಡುತ್ತಾರೆ.

ಕಾರ್ ಸಮೇತ ಚಾಲಕನನ್ನು ಅಪಹರಿಸಿಕೊಂಡು ಹೋಗುತ್ತಾರೆ. ದಾರಿ ಮಧ್ಯೆ ಮತ್ತೆ ಚಾಕು ತೆಗೆದು ಹೆದರಿಸಿದ್ದಲ್ಲದೇ ಹೊಟ್ಟೆ ಮತ್ತು ಬಲಗೈಗೆ ಇರಿಯುತ್ತಾರೆ. ಕೈಕಾಲು ಕಟ್ಟಿಕೊಂಡು ಹಿಂಬದಿ ಸೀಟಿನಲ್ಲಿ ಕೂಡಿಸಿಕೊಂಡಿರುತ್ತಾರೆ. ಶ್ರೀಧರ ಎನ್. ಕಾರು ಚಲಾಯಿಸುತ್ತಾನೆ. ಅಂಕೋಲಾ, ಕುಮಟಾ, ಹೊನ್ನಾವರ ಮಾರ್ಗವಾಗಿ ಭಟ್ಕಳ ಸಮೀಪಿಸುತ್ತಿದ್ದಂತೆ ಚಾಲಕ ಚೀರಲಾರಂಭಿಸುತ್ತಾನೆ. ಹೊನ್ನಾವರ ಮಾರ್ಗದತ್ತ ಕಾರ್ ಚಾಲನೆ ಬದಲಾಯಿಸಿ ಶಿರಾಲಿ ಹತ್ತಿರ ಚೆಕ್‌ಪೋಸ್ಟ್ ಬಳಿಯ ಕಚ್ಚಾ ರಸ್ತೆಯಲ್ಲಿ ಕರೆದುಕೊಂಡು ಹೋಗಿ ಕಾರ್ ನಿಲ್ಲಿಸುತ್ತಾರೆ. ಚಾಲಕನನ್ನು ಹೊರಗೆ ದೂಡಿ, ಕಾರ್ ಸಮೇತ ಪರಾರಿಯಾಗುತ್ತಾರೆ.

ಈ ಕುರಿತು ಮೊದಲು ಭಟ್ಕಳ ಗ್ರಾಮೀಣ ಠಾಣೆಯಲ್ಲಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಪ್ರಶಾಂತ ನಾಯ್ಕ ತನಿಖೆ ನಡೆಸಿ ಹುಬ್ಬಳ್ಳಿ ಉಪನಗರ ಠಾಣೆಗೆ ಪ್ರಕರಣ ವರ್ಗಾಯಿಸಿದ್ದರು. ಆಗಿನ ಸಿಪಿಐ ಸಚಿನ್ ಚಲವಾದಿ ಎನ್ನುವವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಹಿಂದಿನ ಸರ್ಕಾರಿ ಅಭಿಯೋಜಕಿ ಜಿ.ಎಸ್. ತಮ್ಮಿನಾಳ ಭಾಗಶಃ ವಾದ ನಡೆಸಿದ್ದರು. ಈಗಿನ ಸರ್ಕಾರಿ ಅಭಿಯೋಜಕ ಬಿ.ವಿ. ಪಾಟೀಲ ಅವರು ವಾದ ಮಂಡಿಸಿದ್ದು, ವಾದ ಅಲ್ಲಿಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಕಠಿಣ ಶಿಕ್ಷ ವಿಧಿಸಿ ತೀರ್ಪು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net