ಮಾಜಿ ಸಚಿವರ ಕದ್ದ ಆರೋಪಿ ಬಂಧನ, 1.19 ಕೋಟಿ ರೂ. ಮೌಲ್ಯದ 3 ಕಾರುಗಳು ವಶ

Fruad
Published on

ಮೈಸೂರು: ಮಾಜಿ ಸಚಿವ ಕೋಟೆ ಶಿವಣ್ಣ ಅವರ ಕಾರು ಕಳವು ಸೇರಿದಂತೆ ವಿವಿಧೆಡೆ ಕಾರು ಹಾಗೂ ಮನೆಗಳ್ಳತನ ಮಾಡುತ್ತಿದ್ದ ಆಂಧಪ್ರದೇಶ ಮೂಲದ ಕಳ್ಳನೊಬ್ಬನನ್ನು ಬಂಧಿಸಿರುವ ಪೊಲೀಸರು 1.19 ಕೋಟಿ ಮೌಲ್ಯದ ಬೆಲೆ ಬಾಳುವ 3 ಕಾರುಗಳು, 3 ವಾಚ್‌ಗಳು ಮತ್ತು 750 ಗ್ರಾಂ. ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಆಂಧ್ರಪ್ರದೇಶದ ಸತ್ತಿ ರೆಡ್ಡಿ ಅಲಿಯಾಸ್ ಸತ್ತಿ ಬಾಬು (35) ಬಂಧಿತ ಆರೋಪಿ. ಈತ ಕಳವು ಮಾಡಿದ ವಸ್ತುಗಳನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಐಷಾರಾಮಿ ಜೀವನಕ್ಕೆ ಮಾರು ಹೋದ ಹಿನ್ನೆಲೆಯಲ್ಲಿ ಆಗಿಂದಾಗೆ ಮನೆ, ಕಾರು ಕಳವು ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ. ಈತ ಶ್ರೀಮಂತರು ಇರುವ ಬಡಾವಣೆಗಳನ್ನೇ ಗುರಿಯಾಗಿಸಿಕೊಂಡು ಕಾರು, ಮನೆ ಕಳವು ಮಾಡುತ್ತಿದ್ದ ವಿಚಾರ ವಿಚಾರಣೆ ವೇಳೆ ತಿಳಿದು ಬಂದಿದೆ. ಶ್ರೀಮಂತರು ವಾಸವಿರುವ ಬಡಾವಣೆಗಳನ್ನು ಈತ ಗೂಗಲ್ ಮೂಲಕ ಪತ್ತೆ ಹಚ್ಚುತ್ತಿದ್ದ. ನಂತರ ಸ್ಥಳಕ್ಕೆ ಆಗಮಿಸಿ ಮನೆ, ಕಾರು ಕಳವು ಮಾಡುತ್ತಿದ್ದ. ಇಷ್ಟೆಲ್ಲ ಬುದ್ಧಿ ಉಪಯೋಗಿಸಿ ಕಳವು ಮಾಡುತ್ತಿದ್ದ ಈತ ಓದಿರುವುದು ಎಸ್‌ಎಸ್‌ಎಲ್‌ಸಿ ಮಾತ್ರ.

ಆರೋಪಿಯ ಬಂಧನ ಆಗಿದ್ದು ಹೀಗೆ

ಯಾದವಗಿರಿಯ 5ನೇ ಮುಖ್ಯ ರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ವ್ಯಕ್ತಿಯೊಬ್ಬರ ಮಹೀಂದ್ರಾ ಎಕ್ಸ್‌ಯುವಿ 700 ಕಾರು ಕಳುವಾ ಯಿತು. ಇದಾದ ನಂತರ ನಗರದಲ್ಲಿ ಹೆಚ್ಚುತ್ತಿರುವ ಕಾರು ಕಳವು ಪ್ರಕರಣವನ್ನು ಬೇಧಿಸಲು ತಂಡವೊಂದನ್ನು ರಚಿಸಿ ಆರೋಪಿಯನ್ನು ಜು.30 ರಂದು ಬಂಧಿಸಲಾಯಿತು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

64 ಪ್ರಕರಣ ದಾಖಲು

ಆರೋಪಿ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಗಾಂಣದಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಇದೀಗ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ 1 ಕಾರು ಕಳವು, 2 ಕನ್ನ ಕಳವು, ವಿಜಯನಗರ ಪೊಲೀಸ್ ಠಾಣೆಯಲ್ಲಿ 2 ಕಾರು ಕಳವು ಪ್ರಕರಣದಲ್ಲಿ ಈತ ಭಾಗಿಯಾಗಿದ್ದು, ಒಟ್ಟಾರೆ ಈತನ ವಿರುದ್ಧ 64 ಪ್ರಕರಣಗಳು ದಾಖಲಾಗಿವೆ. ಆಂಧ್ರದಲ್ಲಿ 36, ತೆಲಂಗಾಣದಲ್ಲಿ 20 ಮತ್ತು ತಮಿಳುನಾಡಿನಲ್ಲಿ 3, ಕರ್ನಾಟಕದಲ್ಲಿ 5 ಪ್ರಕರಣ ದಾಖಲಾಗಿದೆ. ಚಿತ್ತೂರಿನಲ್ಲಿ ನಡೆದ ಕಳ್ಳವು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಸಂದರ್ಭದಲ್ಲಿಯೇ ನಗರದಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದಾನೆ ಎಂದರು.

ಡಿಸಿಪಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಕೆ. ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿ.ವಿ ಪುರಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ. ಮೋಹನ್ ಕುಮಾರ್, ಎಸ್‌ಐಗಳಾದ ಕೆ. ಲೇಪಾಕ್ಷ, ಕೆ.ಕೆ. ಮೋಹನ್ ಸಿಬ್ಬಂದಿ ಎಸ್. ಪ್ರಸನ್ನ, ಜಿ. ಸುರೇಶ್, ರವಿಗೌಡ, ಎಸ್. ಚೆಲುವರಾಜು, ಸುನಿಲ್ ಕಾಂಬಳೆ, ವೀರಣ್ಣ, ಬಿ. ಉಮೇಶ್, ಹರೀಶ್ ಮತ್ತು ಚಾಮುಂಡಮ್ಮ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net