ಪೊಲೀಸರಿಂದಲೇ ಕಾರು ಮಾರಾಟಕ್ಕೆ ಯತ್ನ : ಆಂತರಿಕ ತನಿಖೆಗೆ ನಿರ್ಧರಿಸಿದ ನಗರ ಆಯುಕ್ತ

POLICE CAP
Published on

ಮಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಆರೋಪಿಗಳ ಕೋಟ್ಯಂತರ ರೂಪಾಯಿ ಮೌಲ್ಯದ ಮೂರು ಐಷಾರಾಮಿ (ಜಾಗ್ವಾರ್, ಪೋಶ್, ಬಿಎಂಡಬ್ಲುೃ) ಕಾರುಗಳನ್ನು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಂತರಿಕ ತನಿಖೆ ನಡೆಸಲು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ಧರಿಸಿದ್ದಾರೆ.

ಕಾರುಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಯಾರಿಂದಲೂ ದೂರು ಬಂದಿಲ್ಲ. ಆದರೆ ನನಗೆ ಮಾಹಿತಿ ಲಭಿಸಿದೆ. ಹಿರಿಯ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯೊಳಗೆ ಆಂತರಿಕ ತನಿಖೆ ನಡೆಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕಡಬ ತಾಲೂಕು ಉದನೆಯಲ್ಲಿ ಕೇರಳ ಮೂಲದ ಮೂವರು ಎಲಿಯ ಕನ್‌ಸ್ಟ್ರಕ್ಷನ್ ಆಂಡ್ ಬಿಲ್ಡರ್ಸ್ ಪ್ರೈ. ಲಿ. ಕಾರ್ಪೊರೇಟ್ ಸಂಸ್ಥೆ ಆರಂಭಿಸಿ ಹಣ ದ್ವಿಗುಣ ವ್ಯವಹಾರ ಆರಂಭಿಸಿದ್ದರು. ಸಾವಿರಾರು ಮಂದಿಯಿಂದ ಸುಮಾರು 30 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿದ್ದರು. ಇದು ದೊಡ್ಡ ಮಟ್ಟದ ವಂಚನೆ ಎಂದು ತಿಳಿದ ಹೂಡಿಕೆದಾರರು ಪೊಲೀಸ್ ಠಾಣೆಗೆ ದೂರು ನೀಡಿದಾಗ ಆತಂಕಿತರಾದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಬಳಿಕ ಮಂಗಳೂರಿನಲ್ಲಿ ಕಚೇರಿ ತೆರೆದು ಹಣ ಸಂಗ್ರಹಿಸಲು ಆರಂಭಿಸಿದ್ದರು. 4.50 ಲಕ್ಷ ರೂ. ಹೂಡಿಕೆ ಮಾಡಿದ್ದ ಶಕ್ತಿನಗರದ ಮಹಿಳೆಯೊಬ್ಬರು ವಂಚನೆ ಅರಿವಿಗೆ ಬರುತ್ತಿದ್ದಂತೆ 2020ರ ಅ.16ರಂದು ನಗರ ನಾರ್ಕೊಟಿಕ್ ಆ್ಯಂಡ್ ಇಕನಾಮಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿ, ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು ಬಳಿಕ ಡೀಲ್‌ಗೆ ಮುಂದಾಗಿದ್ದರು. ಅಷ್ಟೊಂದು ಹಣ ಇಲ್ಲ, ಬೇಕಾದರೆ ಕಾರುಗಳನ್ನು ಇಟ್ಟುಕೊಳ್ಳುವಂತೆ ಆರೋಪಿಗಳು ಹೇಳಿದ ಕಾರಣ ಮಾರಾಟಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಪ್ರಸಕ್ತ ಒಂದು ಕಾರು ನಾಪತ್ತೆಯಾಗಿದೆ, ಎರಡು ಕಾರುಗಳನ್ನು ಪೊಲೀಸ್ ಠಾಣೆಗಳ ಮುಂಭಾಗ ಈಗ ತಂದು ನಿಲ್ಲಿಸಲಾಗಿದೆ.

ಮತ್ತಷ್ಟು ಅವ್ಯವಹಾರ ಬಯಲು: ಬೆಟ್ಟಿಂಗ್ ದಂಧೆಯಲ್ಲಿ ಮುಂಬೈ ಉದ್ಯಮಿಗಳಿಂದ ಸುಲಿಗೆ ಪ್ರಕರಣ, ಫಳ್ನೀರ್ ಆಸ್ಪತ್ರೆಯೊಂದರ ಎದುರು ನಡೆದ ದಾಂಧಲೆ, ಹಾಲು ಸಾಗಾಟ ವಾಹನದಲ್ಲಿ ದನದ ಮಾಂಸ ಸಾಗಾಟ ಪತ್ತೆ ಮೊದಲಾದ ಪ್ರಕರಣಗಳನ್ನು ಅಕ್ರಮ ಡೀಲಿಂಗ್‌ನಲ್ಲಿ ಪೊಲೀಸ್ ಅಧಿಕಾರಿಗಳು ಮುಚ್ಚಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ನೊಂದವರು ಜಿಲ್ಲೆಯ ಹಿರಿಯ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜನಪ್ರತಿನಿಧಿಗಳು ಜಿಲ್ಲೆಯಿಂದ ಅಧಿಕಾರಿಗಳ ಎತ್ತಂಗಡಿಗೆ ಶಿಫಾರಸು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net