

ಬೆಂಗಳೂರು: ಕಾರ್ ಪೂಲಿಂಗ್ ವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳ ತಲುಪಿದ್ದು, ಕಾರ್ ಪೂಲಿಂಗ್‌ಗೆ ಅನುಮತಿ ನೀಡಿ ಎಂದು ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
ಕಾರ್ ಪೂಲಿಂಗ್ ಅನುಮತಿ ನೀಡಲು ಆಗ್ರಹಿಸಿ ತೇಜಸ್ವಿ ಸೂರ್ಯ ಸಿಎಂಗೆ ಬರೆದಿರುವ ಪತ್ರ ಹಾಗೂ ಅವರ ಹೇಳಿಕೆಯನ್ನು ಖಂಡಿಸಿರುವ ಸಾರಿಗೆ ಸಂಘಟನೆಗಳ ಒಕ್ಕೂಟ ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಸಾರಿಗೆ ಸಚಿವರಿಗೆ ಹಾಗೂ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕನಿಷ್ಠ ಜ್ಞಾನದ ಬಗ್ಗೆ ತಿಳಿ ಹೇಳಲು ಸಾರಿಗೆ ಸಂಘಟನೆಗಳ ಒಕ್ಕೂಟ ಒತ್ತಾಯಿದೆ.
ಐದು ದಿನಗಳ ಗಡುವು:
ಸಂಸದ ತೇಜಸ್ವಿ ಸೂರ್ಯ ಅವರು, ತಮ್ಮ ಹೇಳಿಕೆಯನ್ನು ಸೆ.೧೩ ರ ಒಳಗಾಗಿ ವಾಪಸ್ ಪಡೆಯದೇ ಇದ್ದಲ್ಲಿ ಜಯನಗರದ ಅವರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದು ಒಕ್ಕೂಟ ಅಧ್ಯಕ್ಷ ನಟರಾಜ ಶರ್ಮ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು, ತಮ್ಮ ಹೇಳಿಕೆ ವಾಪಸ್ ಪಡೆಯದೇ ಹೋದರೆ ಮುಂದಿನ ಚುನಾವಣೆಯವರೆಗೂ ಅವರು ಏರ್ಪೋಟ್‌ಗೆ ಬಂದ ಸಂದರ್ಭದಲ್ಲಿ ಹಾಗೂ ಬೆಂಗಳೂರಿನ ಯಾವುದೇ ಸ್ಥಳದಲ್ಲಿ ಕಂಡಾಗ ಸಾರಿಗೆ ಸಂಘಟನೆಗಳ ಸದಸ್ಯರು ಕಪ್ಪು ಬಟ್ಟೆ ಪ್ರದರ್ಶಿಸುವ ದಿಕ್ಕಾರ ಕೂಗಲಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಆಟೋ, ಟ್ಯಾಕ್ಸಿ ಚಾಲನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಸುಮಾರು ೧೧ ಲಕ್ಷ ಚಾಲಕರು ಮತ್ತು ಇವರ ಕುಟುಂಬದ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳ ಏಜೆಂಟ ಆಗಿ ತೇಜಸ್ವಿ ಸೂರ್ಯ ಕೆಲಸ ಮಾಡುತ್ತಿರುವ ಹಾಗೆ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಟೀಕಿಸಿದ್ದಾರೆ.