ಕಾರು ಹಾಯ್ದು ಸ್ಥಳದಲ್ಲೇ 38 ಕುರಿಗಳ ಸಾವು

01002
Published on

ಬೆಳಗಾವಿ: ಕುರಿಗಳ ಹಿಂಡುಗಳ ಮೇಲೆ ಕಾರೊಂದು ಹಾಯ್ದ ಪರಿಣಾಮ 38 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದ ಬಳಿ ಭಾನುವಾರ ನಸುಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೈಲಹೊಂಗಲ ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಕುರಿಗಾಹಿ ಯಲ್ಲಪ್ಪ ಬಿಜ್ಜಣ್ಣವರ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಮೇವಿಗಾಗಿ ಕುರಿಗಳೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸವದತ್ತಿಯಿಂದ ನರಗುಂದ ಕಡೆಗೆ ಹೋಗುವ ಸಂದಭರ್ದಲ್ಲಿ ಚಿಕ್ಕಉಳ್ಳಿಗೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. 50ಕ್ಕೂ ಹೆಚ್ಚು ಕುರಿಗಳಿಗೆ ಗಂಭೀರ ಗಾಯಗಳಾಗಿವೆ.

6 ಲಕ್ಷ ರೂಪಾಯಿಗೂ ಅಧಿಕ ಹಾನಿಯಾಗಿದೆ. ‘ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದಾಗಿ ದಿಕ್ಕು ತೋಚದಂತಾಗಿದೆ’ ಎಂದು ಯಲ್ಲಪ್ಪ ಬಿಜ್ಜಣ್ಣವರ ಅಳಲು ತೋಡಿಕೊಂಡಿದ್ದಾರೆ. ಅಪಘಾತದ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net