

ಮೂಲ್ಕಿ: ಕೊಲ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿ ಸಂಪೂರ್ಣ ಭಸ್ಮವಾಗಿದ್ದು, ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಾರ್ನಾಡು ನಿವಾಸಿ ಫಯಾಝ್ ಅವರು ಕಾರನ್ನು ಪಣಂಬೂರಿನಿಂದ ಮೂಲ್ಕಿಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಕೊಲ್ನಾಡು ಬಳಿ ಕಾರಿನ ಬಾನೆಟ್ ಒಳಗಡೆ ಬೆಂಕಿ ಹತ್ತಿರುವುದನ್ನು ಗಮನಿಸಿದ್ದರು. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿ ಹೊರಧಾವಿಸಿದರು. ಈ ಸಂದರ್ಭ ಅಕ್ಕಪಕ್ಕದವರು ನೋಡುತ್ತಿದ್ದಂತೆ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಳಿಕ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು. ಈ ಸಂದರ್ಭ ಕಾರಿನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಳ್ಳುವ ಭೀತಿ ಕಾರಣ ಸಂಚಾರಿ ಪೊಲೀಸರು ಮತ್ತು ಮೂಲ್ಕಿ ಪೊಲೀಸರು ಹೆದ್ದಾರಿಯ ಒಂದೇ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.