ಕಾರು ಗುದ್ದಿ ಸಂಚಾರ ಮುಖ್ಯಪೇದೆ ಸಾವು: ಅತಿವೇಗದ ಚಾಲನೆ ತಪಾಸಣೆ ವೇಳೆ ಅವಘಡ

Pede
Published on

ಬೆಂಗಳೂರು: ವೇಗದ ಚಾಲನೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರಿಗೆ ಅಡ್ಡಾದಿಡ್ಡಿಯಾಗಿ ಬಂದ ಕಾರು ಡಿಕ್ಕಿ ಹೊಡೆದು ಮುಖ್ಯಪೇದೆ ಸ್ಥಳದಲ್ಲೇ ಮೃತಪಟ್ಟಿದ್ದು, ಪೇದೆ ಗಾಯಗೊಂಡಿದ್ದಾರೆ.

ಚಿಕ್ಕಜಾಲ ಸಂಚಾರ ಠಾಣೆ ಮುಖ್ಯಪೇದೆ ಧನಂಜಯ (40) ಮೃತ ದುರ್ದೈವಿ. ಪೇದೆ ಉಮಾಮಹೇಶ್ವರ್ (28) ಎಂಬುವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಕುಶಾಲ್ ರಾಜ್ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶನಿವಾರ ಧನಂಜಯ, ಉಮಾಮಹೇಶ್ವರ್ ಸೇರಿ ಮೂವರು ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಇಂಟರ್​ಸೆಪ್ಟರ್ ವಾಹನದೊಂದಿಗೆ ವೇಗವಾಗಿ ಚಲಾಯಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಮಧ್ಯಾಹ್ನ ಊಟ ಮುಗಿಸಿ ಕೆಐಎ ರಸ್ತೆ ಕಾಡೇನಹಳ್ಳಿ ಬಳಿ ಕರ್ತವ್ಯ ಮುಂದುವರಿಸಿದ್ದರು. ವೇಗವಾಗಿ ಬಂದ ವಾಹನ ತಡೆದು ಚಾಲಕನ ಡಿಎಲ್, ವಾಹನ ದಾಖಲೆಗಳನ್ನು ಧನಂಜಯ ಮತ್ತು ಪೇದೆ ಪರಿಶೀಲನೆ ನಡೆಸುತ್ತಿದ್ದರು.

ಅದೇ ಮಾರ್ಗದಲ್ಲಿ ಬಂದ ಕಾರು ಚಾಲಕ ಕುಶಾಲ್​ರಾಜ್, ರಸ್ತೆಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ತಿರುಗಿ ಪೊಲೀಸರಿಗೆ ಹಿಂದಿನಿಂದ ಗುದ್ದಿದ್ದಾನೆ. ತೀವ್ರ ಗಾಯಗೊಂಡ ಧನಂಜಯ ಮತ್ತು ಉಮಾಮಹೇಶ್ವರ್ ಅವರನ್ನು ಸಹೋದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಧನಂಜಯ ಮೃತಪಟ್ಟಿದ್ದಾರೆ. ಉಮಾಮಹೇಶ್ವರ್​ಗೆ ಚಿಕಿತ್ಸೆ ಮುಂದುವರಿದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಕುಟುಂಬದ ಜತೆ ನೆಲೆಸಿದ್ದ ಧನಂಜಯ ಅವರ ಪತ್ನಿ ಅನಸೂಯ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೆಬಲ್ ಆಗಿದ್ದಾರೆ.

ವಿಮಾನಕ್ಕೆ ತೆರಳುವ ತರಾತುರಿ

ಬಸವನಗುಡಿ ನಿವಾಸಿಯಾದ ಕುಶಾಲ್ ರಾಜ್, ಸುಲ್ತಾನ್​ಪೇಟೆಯಲ್ಲಿ ಬಟ್ಟೆ ಅಂಗಡಿ ಹೊಂದಿದ್ದಾರೆ. ಶನಿವಾರ ಸಂಜೆ ಮುಂಬೈಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಸಂಜೆ 7.10ಕ್ಕೆ ವಿಮಾನವಿತ್ತು. ಐ10 ಕಾರಿನಲ್ಲಿ ಅತಿ ವೇಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಲಕ್ಷ್ಯಕ್ಕೆ ಹೊಣೆ ಯಾರು?

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲು ಸಂಚಾರ ಪೊಲೀಸರಿಗೆ ಅಧಿಕಾರವಿದೆ. ಜತೆಗೆ ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬ ವಾಹನ ಚಾಲಕ/ಸವಾರನ ಕರ್ತವ್ಯವಾಗಿದೆ. ಆದರೆ, ಕೆಲ ಪೊಲೀಸರು ಮರೆಯಲ್ಲಿ ನಿಂತು ಏಕಾಏಕಿ ರಸ್ತೆ ಮಧ್ಯಕ್ಕೆ ಬಂದು ವಾಹನ ತಡೆಯುವ ದುಸ್ಸಾಹಸ ಮಾಡುತ್ತಾರೆ. ಇಂಥ ಅನೇಕ ಪ್ರಕರಣಗಳಲ್ಲಿ ಅವರ ಪ್ರಾಣಕ್ಕೆ ಸಂಚಕಾರ ಒದಗಿದ ನಿದರ್ಶನಗಳಿವೆ. ಆದರೂ, ಅವರು ತಮ್ಮ ಪ್ರಾಣದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿಲ್ಲ. ಸಂಚಾರ ಪೊಲೀಸರು ತಪ್ಪು ತಡೆಯುವ ಉದ್ದೇಶದಿಂದ ಹೀಗೆ ಮಾಡುವುದು ಎಷ್ಟು ಸರಿ ಎಂಬ ಜಿಜ್ಞಾಸೆ ಮೂಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net