

ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರು ಗಾಯ ಗೊಂಡಿದ್ದಾರೆ.
ರಾಜಸ್ಥಾನ ಮೂಲದ ಅನಿಲ್ (28), ತನಿಷಾ (17), ಅಂಕಿತ್ (8), ಜಯಿಷ್ (21), ರಿಂಕಿ (25) ಗಾಯ ಗೊಂಡವರು.
ಇವರು ಬೆಂಗಳೂರಿನಿಂದ ಕಾರಿನಲ್ಲಿ ಊಟಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಉತ್ತಂಬಳ್ಳಿ ಬಳಿ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಎದುರು ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಚಾಮರಾಜನಗರ ದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಇದಾಗಿದ್ದು ಚಾಲಕ ಬೈಪಾಸ್ ರಸ್ತೆಯ ಎಡ ಭಾಗದ ಸರ್ವಿಸ್ ರಸ್ತೆಯಲ್ಲಿ ತೆರಳದೆ ನಿಯಮ ಉಲಂಘಿಸಿ ಬಲ ಭಾಗದ ಸರ್ವಿಸ್ ರಸ್ತೆಯಲ್ಲಿ ಸಂಚರಿಸಿದ ಪರಿಣಾಮ ಅವಘಡ ನಡೆದಿದೆ.
ಗಾಯಗೊಂಡ ಕಾರಿನಲ್ಲಿದ್ದ ಐವರನ್ನು ಅಂಬ್ಯುಲೆನ್ಸ್ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಥಮ ಚಿಕಿತ್ಸೆ ಬಳಿಕ ವ್ಯೆದ್ಯರ ಸಲಹೆಯಂತೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಐವರು ಗಾಯಾಳುಗಳ ಪೈಕಿ 8 ವರ್ಷದ ಬಾಲಕ ಅಂಕಿತ್‌ಗೆ ಸಣ್ಣ ಪುಟ್ಟ ಗಾಯವಾಗಿದೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸಂಬಂಧ ಅಗರ- ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.