

ಕಲಬುರಗಿ: ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್-ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಮದುವೆ ಆಮಂತ್ರಣ ಪತ್ರಿಕೆ ನೀಡಲು ಬೈಕ್ನಲ್ಲಿ ತೆರಳುತ್ತಿದ್ದ ಮದುಮಗ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜೇವರ್ಗಿ ತಾಲೂಕಿನ ಜೇರಟಗಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಯಡ್ರಾಮಿ ತಾಲೂಕಿನ ಕೋಣಶಿರಸಗಿ ಗ್ರಾಮದ ಗುರುರಾಜ (30) ಹಾಗೂ ವಸ್ತಾರಿ ಗ್ರಾಮದ ದೇವೇಂದ್ರಪ್ಪ (30) ಮೃತ ದುರ್ದೈವಿಗಳು.
ಎಪ್ರಿಲ್ 17 ರಂದು ದೇವೇಂದ್ರಪ್ಪ ಅವರ ಮದುವೆ ನಿಶ್ಚಯವಾಗಿದ್ದು, ಸಂಬಂಧಿಕರಿಗೆ ಮದುವೆ ಆಹ್ವಾನ ಪತ್ರ ನೀಡಲು ಜೇರಟಗಿಯತ್ತ ತೆರಳುತ್ತಿದ್ದರು.
ಓವರಟೇಕ್ ಮಾಡಿಕೊಂಡು ವೇಗವಾಗಿ ಬಂದ ಇನೋವಾ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.