

ಪಡುಬಿದ್ರಿ: ಉಡುಪಿಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳು ಸರ್ಕಾರಿ ಶಾಲೆ ಮುಂಭಾಗ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ಬಸ್‌ಗಾಗಿ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಎರ್ಮಾಳು ನಿವಾಸಿ ಸಂಜೀವ ದೇವಾಡಿಗ(47) ಮತ್ತು ಉತ್ತರ ಪ್ರದೇಶ ಮೂಲದ ಅರವಿಂದ್(22) ಮೃತರು. ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವಿವಾಹಿತರಾಗಿರುವ ಸಂಜೀವ ತಾಯಿ ಹಾಗೂ ಸಹೋದರಿ ಜತೆ ಮನೆಯಲ್ಲಿಯೇ ಇರುತ್ತಿದ್ದು, ಪ್ರತಿದಿನ ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ತೆರಳಿ ಧ್ಯಾನದಲ್ಲಿ ತೊಡಗುತ್ತಿದ್ದರು. ಎಂದಿನಂತೆ ಶುಕ್ರವಾರವೂ ಬ್ರಹ್ಮಸ್ಥಾನಕ್ಕೆ ಹೋಗಲು ಬಸ್‌ಗೆ ಕಾಯುತ್ತಿದ್ದರು. ಮಾರ್ಬಲ್ ಅಳವಡಿಸುವ ಕಾರ್ಮಿಕ ಅರವಿಂದ್ ಎರ್ಮಾಳಿನಲ್ಲಿ ಕೆಲಸ ಮುಗಿಸಿ ಹಿಂತಿರುಗಲು ಬಸ್‌ಗೆ ಕಾಯುತ್ತಿದ್ದರು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.