

ಬೆಂಗಳೂರು: ಮೇಖ್ರಿ ವೃತ್ತದ ಕೆಳರಸ್ತೆಯಲ್ಲಿ ಸರಣಿ ಅಪಘಾತ ಮಾಡಿದ ಐಷಾರಾಮಿ ಬೆಂಟ್ಲಿ ಕಾರನ್ನು ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮಹಮದ್ ನಲಪಾಡ್ ಚಲಾಯಿಸುತ್ತಿದ್ದರು ಎನ್ನುವುದಕ್ಕೆ ಸದಾಶಿವನಗರ ಸಂಚಾರ ಪೊಲೀಸರು ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಭಾನುವಾರ (ಫೆ.9) ಮಧ್ಯಾಹ್ನ 2.30ರಲ್ಲಿ ಆಟೋ ಮತ್ತು ಬೈಕ್ಗೆ ಬೆಂಟ್ಲಿ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರ ಹಾಗೂ ಆಟೋದಲ್ಲಿದ್ದ ಮಹಿಳೆ ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸರು ನಲಪಾಡ್ಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಅಪಘಾತದ ವೇಳೆ ತಾನು ಬೆಂಟ್ಲಿ ಕಾರಿನಲ್ಲಿರಲಿಲ್ಲ. ಆ ಕಾರಿನ ಹಿಂದಿದ್ದ ಮತ್ತೊಂದು ಕಾರಿನಲ್ಲಿದ್ದೆ ಎಂದು ಹೇಳಿಕೆ ನೀಡಿದ್ದರು.
ಬಳ್ಳಾರಿ ರಸ್ತೆಯಲ್ಲಿ ಮೇಖ್ರಿ ವೃತ್ತದ ಕಡೆಗೆ ಬೆಂಟ್ಲಿ ಕಾರು ಬರುತ್ತಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಇರುವ ಟೋಲ್ಗೇಟ್ನಿಂದ ಮೇಖ್ರಿ ವೃತ್ತದವರೆಗೆ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ಸಂಭವಿಸಿದ ಸಮಯದಲ್ಲಿ ನಲಪಾಡ್ ಫೋನ್ ಲೊಕೇಷನ್ ಮೇಖ್ರಿ ವೃತ್ತದ ಬಳಿ ತೋರಿಸುತ್ತಿತ್ತು. ಅಲ್ಲದೆ, ಪ್ರತ್ಯಕ್ಷದರ್ಶಿಯೊಬ್ಬರು ಮಹಮದ್ ನಲಪಾಡ್ನನ್ನು ಗುರುತಿಸಿದ್ದಾರೆ.
ಆದರೆ, ಅದನ್ನು ನಲಪಾಡ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಸಾಕ್ಷ್ಯ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಲತಾಣಗಳಲ್ಲಿ ವೈರಲ್!: ಮೇಖ್ರಿ ವೃತ್ತದ ಕೆಳರಸ್ತೆಯಲ್ಲಿ ಬೆಂಟ್ಲಿ ಕಾರು ವೇಗವಾಗಿ ಸಾಗುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದೆ ಹೋಗುತ್ತಿದ್ದ ಕೆಲ ವಾಹನಗಳನ್ನು ಬೆಂಟ್ಲಿ ಕಾರು ಹಿಂದಿಕ್ಕಿದೆ. ಅದರಲ್ಲಿ ಅಪಘಾತ ಸಂಭವಿಸಿರುವುದು ದಾಖಲಾಗಿಲ್ಲ. ಅಲ್ಲದೆ, ಕಾರಿನಲ್ಲಿದ್ದ ಪ್ರಯಾಣಿಕರ ಮುಖಚಹರೆಯೂ ಗೊತ್ತಾಗುವುದಿಲ್ಲ.